ನ್ಯೂಸ್

ನಟಿ ರನ್ಯಾರಾವ್ ಜಾಮೀನು ತೀರ್ಪು ಶುಕ್ರವಾರಕ್ಕೆ ಮುಂದೂಡಿಕೆ

ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾರಾವ್ ಜಾಮೀನು ತೀರ್ಪು ಅನ್ನು ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮೇ ೧೬ಕ್ಕೆ ಮುಂದೂಡಿದೆ.

ರನ್ಯಾರಾವ್ ವಕೀಲರ ಮೂಲಕ ಮತ್ತೊಮ್ಮೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸದೆ, ವಿನಾಃ ಕಾರಣ ದಿನ ಮುಂದೂಡುತ್ತಿದ್ದಾರೆ. ಆದ್ದರಿಂದ ಜಾಮೀನು ನೀಡಬೇಕೆಂದು ರನ್ಯಾರಾವ್ ಪರ ವಕೀಲರು ಕೋರಿದ್ದರು. ಅರ್ಜಿಯ ಸಂಬಂಧ ಈ ಹಿಂದೆ ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, ಸೋಮವಾರ(ಮೇ ೧೨) ಕ್ಕೆ ತೀರ್ಪು ಕಾಯ್ದಿರಿಸಿತ್ತು. ಆದರೆ, ಇದೀಗ ಮೇ ೧೬ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿ ಮುಂದೂಡಿದೆ.

ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಪುತ್ರಿ ರನ್ಯಾ ಅವರನ್ನು ಮಾ.೩ ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು, ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬಂಧಿಸಿ ಆಕೆಯಿಂದ ೧೪.೨ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ನಂತರ, ಡಿಆರ್‌ಐ ಅವರ ಇಬ್ಬರು ಸಹಚರರನ್ನು ಬಂಧಿಸಿತ್ತು. ಈ ಹಿಂದೆ ರನ್ಯಾರಾವ್ ವಿಶೇಷ ನ್ಯಾಯಾಲಯ ಹಾಗೂ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ಮಾತ್ರ ಸಿಕ್ಕಿರಲಿಲ್ಲ.