- ಕಳೆದ ವರ್ಷ ಜಿಮ್ ನಲ್ಲಿ ಗಾಯಗೊಂಡಿದ್ದ ನಟಿ
- 18 ತಿಂಗಳ ಬಳಿಕ ಜಿಮ್ ಗೆ ಮರಳಿದ ರಕುಲ್ ಪ್ರೀತ್
- ಮನೆಗೆ ಬಂದಂತಹ ಸಡಗರ ಎಂದು ಖುಷಿಹಂಚಿಕೊಂಡ ನಟಿ
ಕನ್ನಡದ ‘ಗಿಲ್ಲಿ’ ಖ್ಯಾತಿಯ ಬಹುಭಾಷಾ ತಾರೆ ರಕುಲ್ ಪ್ರೀತ್ ಸಿಂಗ್ ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಫಿಟ್ ಆಗಿರಲು ಯೋಗಾಭ್ಯಾಸ ಸೇರಿ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಅವರು ಜಿಮ್‌ನತ್ತ ಸುಳಿದಿರಲಿಲ್ಲ. ಅದಕ್ಕೆ ಕಾರಣ, 2025ರ ಆರಂಭದಲ್ಲಿ ಅವರು ಜಿಮ್‌ನಲ್ಲಿ ಯಾವುದೇ ಸುರಕ್ಷತಾ ವಹಿಸದೆ 80 ಕೆಜಿ ಭಾರ ಎತ್ತಲು ಹೋಗಿ ಬೆನ್ನಿಗೆ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿ ಎರಡು ತಿಂಗಳು ವಿಶ್ರಾಂತಿ ಪಡೆದಿದ್ದರು. ನಂತರ ಗುಣಮುಖರಾಗಿ ಶೂಟಿಂಗ್, ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದೀಗ 18 ತಿಂಗಳ ಬಳಿಕ ರಕುಲ್ ಜಿಮ್‌ಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡು, ‘ಜೀವನದಲ್ಲಿ ಯಾವುದೂ ನಿರೀಕ್ಷಿತವಲ್ಲ. ನಾನು ಕೂಡ ಅನಿರೀಕ್ಷಿತವಾಗಿಯೇ ಗಂಭೀರವಾಗಿ ಗಾಯಗೊಂಡಿದ್ದೆ. ಆ ಒಂದು ಘಳಿಗೆ ನನ್ನನ್ನು ಮತ್ತಷ್ಟು ಗಟ್ಟಿಯಾಗಲು ಪ್ರೇರೇಪಿಸಿತು. ನನ್ನ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಜಿಮ್‌ನಿಂದ ಸುದೀರ್ಘವಾಗಿ ಹಲವು ತಿಂಗಳ ಕಾಲ ದೂರ ಇದ್ದ ನೋವು, ಗಾಯದ ನೋವಿಗಿಂತ ತೀವ್ರವಾಗಿತ್ತು. ಜಿಮ್ ಕೇವಲ ದೇಹ ದಂಡಿಸುವ ಸ್ಥಳವಲ್ಲ. ಅದು ಶಿಸ್ತಿನ ಜತೆಗೆ ಮಾನಸಿಕ ಸ್ಥೈರ್ಯ, ಜೀವನದ ಏಳಿಗೆಯನ್ನು ಕಲಿಸುತ್ತದೆ. ಇದೀಗ ಹಲವು ತಿಂಗಳ ಬಳಿಕ ಜಿಮ್‌ಗೆ ಮರಳಿರುವುದು ಮನೆಗೆ ವಾಪಸ್ಸಾದ ಅನುಭವ ನೀಡುತ್ತಿದೆ. ಎಲ್ಲವೂ ಹಾಗೆಯೇ ಇದೆ. ಆದರೆ, ನಾನು ಬದಲಾಗಿದ್ದೇನೆ. ಮೊದಲಿನಂತೆಯೇ ಮತ್ತೆ ತಯಾರಿ ನಡೆಸುವೆ. ಹೊಸದನ್ನು ಕಲಿಯುವೆ’ ಎಂದು ಬರೆದುಕೊಂಡಿದ್ದಾರೆ. ರಕುಲ್ ಸದ್ಯ ‘ಇಂಡಿಯನ್ 3’ , ‘ರಾಮಾಯಣ’ ಚಿತ್ರದ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್