ನ್ಯೂಸ್

ಹೇಗಿದ್ದೆ? ಹೀಗಾದೆ!: ಸರಳ ವ್ಯಾಯಾಮದಿಂದಲೇ ದೇಹ ದಂಡಿಸಿದ ನಟಿ ಪ್ರಿಯಾಂಕಾ

ಬೆಂಗಳೂರು: ‘ಅದು 2019. ಆಗ ಎರಡು-ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದೆ. ಸ್ವಲ್ಪ ದಪ್ಪ ಇದ್ದೇನೆ ಎಂದೆನಿಸುತ್ತಿತ್ತು. ಅಲ್ಲದೇ, ಕೆಲವರು ನನ್ನ ದೇಹದ ಬಗ್ಗೆ ಕುಹಕವಾಗಿ ಮಾತನಾಡಿದ್ದರು. ಇದರಿಂದ ನಾನು ಸಾಕಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಹೊರಬರಬೇಕೆಂದು ನಿರ್ಧರಿಸಿ ವರ್ಕೌಟ್ ಜರ್ನಿ ಆರಂಭಿಸಿದೆ. ಅದರ ಫಲಿತಾಂಶ ಇಂದು ದೊರೆತಿದೆ’. - ಫಿಟ್ನೆಸ್ ಜರ್ನಿ ಆರಂಭಿಸಿದ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾರೆ ‘ಬಿಗ್‌ಬಾಸ್ 8’ರಲ್ಲಿ ಮಿಂಚಿದ್ದ ‘ಅರ್ಜುನ್ ಗೌಡ’, ‘ಭೀಮಸೇನ ನಳಮಹಾರಾಜ’ ಖ್ಯಾತಿಯ ನಟಿ ಪ್ರಿಯಾಂಕಾ ತಿಮ್ಮೇಶ್. ‘‘ಅರ್ಜುನ್ ಗೌಡ’ ಶೂಟಿಂಗ್ ಸಮಯದಲ್ಲಿ 64 ಕೆಜಿ ಇದ್ದೆ. ಹಾಗಂಥ, ದಪ್ಪ ಇದ್ದೇನೆ ಎಂದು ಅವಕಾಶಗಳೇನೂ ಕಡಿಮೆಯಾಗಿರಲಿಲ್ಲ. ನನ್ನ ಕ್ಯೂಟ್‌ನೆಸ್‌ಗೆ ಅವಕಾಶಗಳಿದ್ದವು. ಆದರೆ, ಭವಿಷ್ಯದ ಬಗ್ಗೆ ಆಲೋಚನೆ ಬಂದಾಗ ತೂಕ ಇಳಿಸಿಕೊಳ್ಳಬೇಕು ಅಂತನಿಸಿತು. ಅದೇ ವೇಳೆ ಲಾಕ್‌ಡೌನ್ ಆಯಿತು. ಇದೇ ಸೂಕ್ತ ಸಮಯ ಎಂದು ವರ್ಕೌಟ್ ಆರಂಭಿಸಿದೆ’ ಎನ್ನುತ್ತಾರೆ.

ಮಿಷನ್ 50 ಕೆಜಿ: ಪ್ರಿಯಾಂಕಾ ತಿಮ್ಮೇಶ್ ತೂಕ ಇಳಿಸುವುಕ್ಕಾಗಿ ಜಿಮ್‌ಗೆ ಹೋಗಿ ಬೆವರು ಇಳಿಸಿದವರಲ್ಲ. ಬದಲಾಗಿ ಮನೆಯಲ್ಲಿಯೇ ಸರಳ ವ್ಯಾಯಾಮ ಮಾಡುತ್ತಾರಂತೆ. ‘ನಾನು ಜಿಮ್‌ಗೆ ಹೋಗುವುದಿಲ್ಲ. ಮನೆಯಲ್ಲಿಯೇ ದಿನಕ್ಕೆ 40ರಿಂದ 50 ನಿಮಿಷಗಳ ಕಾಲ ಕಾರ್ಡಿಯೋ ಮಾಡುತ್ತೇನೆ. ಬೆವರು ಬರುವವರೆಗೂ ದೇಹ ದಂಡಿಸುತ್ತೇನೆ. ಕೊನೆಗೆ ಸೂರ್ಯ ನಮಸ್ಕಾರ ಮಾಡುತ್ತೇನೆ ಇಷ್ಟೇ ನನ್ನ ಫಿಟ್ನೆಸ್ ಮಂತ್ರ. ಆದರೆ, ಊಟದ ವಿಚಾರದಲ್ಲಿ ಶಿಸ್ತು ರೂಢಿಸಿಕೊಂಡಿದ್ದೇನೆ. ಹಣ್ಣು, ತರಕಾರಿ, ಪ್ರೊಟೀನ್‌ಗೆ ಹೆಚ್ಚು ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ. ಮೂರು ವರ್ಷಗಳ ಹಿಂದೆ 64 ಕೆಜಿ ಇದ್ದ ನಟಿ ಇದೀಗ 50 ಕೆಜಿಗೆ ಇಳಿದಿದ್ದಾರೆ.

ಪ್ರತಿಭೆ ಮುಖ್ಯ: ನಟಿಯರು ಹೀಗೇ ಇರಬೇಕಾ ಎಂಬ ಪ್ರಶ್ನೆಗೆ, ‘ಪ್ರತಿಭಾವಂತರಿಗೆ ಯಾವುದೇ ಬಣ್ಣ, ಆಕಾರ, ಗಾತ್ರ ಲೆಕ್ಕಕ್ಕೆ ಬರುವುದಿಲ್ಲ. ಪ್ರತಿಭೆ ಇದ್ದಾಗ ಅವಕಾಶಗಳು ಹುಡುಕಿಕೊಂಡು ಬರುತ್ತವೆ’ ಎನ್ನುವ ಪ್ರಿಯಾಂಕಾ, ‘ಈ ಫಿಟ್ನೆಸ್ ಜರ್ನಿ ನನ್ನ ಆರೋಗ್ಯ, ಸಂತೋಷಕ್ಕಾಗಿ ವಿನಾ ಯಾವುದೇ ಅವಕಾಶಕ್ಕಾಗಿ ಅಲ್ಲ. ಹಿಂದೆ ‘ಭೀಮಸೇನ ನಳಮಹಾರಾಜ’ ಸಮಯದಲ್ಲಿ ನಾನು ದಪ್ಪ ಇದ್ದೆ. ಆ ಕಾರಣಕ್ಕಾಗಿಯೇ ಅವಕಾಶ ಹುಡುಕಿಕೊಂಡು ಬಂದಿತ್ತು. ನಮ್ಮ ಮೈನಸ್ ವಿಚಾರಗಳನ್ನು ಪ್ಲಸ್ ಮಾಡಿಕೊಳ್ಳುವುದರಲ್ಲಿ ಯಶಸ್ಸು ಅಡಗಿದೆ’ ಎನ್ನುತ್ತಾರೆ.

ವರ್ಷಾಂತ್ಯಕ್ಕೆ ‘ಕುಟೀರ’: ಸದ್ಯ ಪ್ರಿಯಾಂಕಾ, ಕೋಮಲ್‌ಗೆ ನಾಯಕಿಯಾಗಿ ‘ಕುಟೀರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಧುನಿಕ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಒಂದು ಸಾಂಗ್ ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಪಾತ್ರ ಬಾಕಿಯಿದೆ. ಇದೇ ವರ್ಷದಂತ್ಯಕ್ಕೆ ಸಿನಿಮಾ ರಿಲೀಸ್ ಆಗಬಹುದು ಎಂದು ಮಾಹಿತಿ ನೀಡುತ್ತಾರೆ ಪ್ರಿಯಾಂಕಾ.