"ರಾಜಕುಮಾರ', "ಆರೇಂಜ್', "ಜೇಮ್ಸ್', "ಕರಟಕ ದಮನಕ' ಚಿತ್ರಗಳ ಬಳಿಕ ಕಾಲಿವುಡ್ ಮೂಲದ ಬಹುಭಾಷಾ ನಟಿ ಪ್ರಿಯಾ ಆನಂದ್, "ಬಲರಾಮನ ದಿನಗಳು' ಮೂಲಕ ಮತ್ತೆ ಕನ್ನಡಕ್ಕೆ ವಾಪಸ್ಸಾಗಿರುವುದು ಗೊತ್ತಿದೆ. "ಆ ದಿನಗಳು' ನಂತರ ಬರೋಬ್ಬರಿ 19 ವರ್ಷಗಳ ಬಳಿಕ ನಿರ್ದೇಶಕ ಕೆ.ಎಂ.ಚೈತನ್ಯ ಆ್ಯಕ್ಷನ್-ಕಟ್ ಹೇಳಿರುವ ಗ್ಯಾಂಗ್ಸ್ಟರ್ ಚಿತ್ರವಾದ ಕಾರಣ "ಬಲರಾಮನ ದಿನಗಳು' ಬಗ್ಗೆ ಪ್ರಾರಂಭದಿಂದಲೂ ಕುತೂಹಲವಿತ್ತು. ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿದ್ದು, ಅವರಿಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. "ಕನ್ನಡದಲ್ಲಿ ನಾನು ಇದುವರೆಗೆ ನಟಿಸಿದ ಎಲ್ಲ ನಾಲ್ಕು ಚಿತ್ರಗಳೂ ಕಮರ್ಷಿಯಲ್ ಸಿನಿಮಾ ಆಗಿದ್ದವು. "ಬಲರಾಮನ ದಿನಗಳು' ನನಗೆ ಮೊದಲ ರೆಟ್ರೋ ಶೈಲಿಯ ಗ್ಯಾಂಗ್ಸ್ಟರ್ ಚಿತ್ರ. ನನಗಿಲ್ಲಿ ಚೈತನ್ಯ ಸರ್ ತುಂಬ ಒಳ್ಳೆ ಪಾತ್ರ ನೀಡಿದ್ದಾರೆ. ಇದು ಗ್ಯಾಂಗ್ಸ್ಟರ್ ಸಿನಿಮಾ ಅಂತ ಎಲ್ಲರಿಗೂ ಗೊತ್ತು. ಜತೆಗೆ ಆಗಲೇ "ಆ ದಿನಗಳು' ಕಲ್ಟ್ ಹಿಟ್ ಆಗಿತ್ತು. ಹೀಗಾಗಿಯೇ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ. ಹಾಗೇ ಚೈತನ್ಯ ಈ ಹೊಸ ಕಥೆಯನ್ನು ಹೇಗೆ ಮಾಡಿದ್ದಾರೆ ಎಂಬ ಕುತೂಹಲವೂ ಇದೆ. ಹೀಗಾಗಿ ಈ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಲು ನಾನೂ ಎಕ್ಸೈಟೆಡ್ ಆಗಿದ್ದೆ. ಬಲರಾಮನ ಕಥೆಯಿದು. ಹಾಗಂತ ನನ್ನದು ಗ್ಲಾಮರ್ಗಾಗಿ ಹಾಗೆ ಬಂದು ಹೀಗೆ ಹೋಗುವ ಪಾತ್ರವಲ್ಲ. ಬಲರಾಮನ ಜರ್ನಿಯಲ್ಲಿ ನನ್ನ ಪಾತ್ರವೂ ಒಂದು ಪ್ರಮುಖ ಭಾಗ. ಹೀಗಾಗಿ ಹೆಚ್ಚು ಸ್ಕ್ರೀನ್ ಸ್ಪೇಸ್ ಕೂಡ ಇದೆ' ಎಂದು ಮಾಹಿತಿ ನೀಡುತ್ತಾರೆ.
ಚಂದನವನದ ಚಂದದ ಅನುಭವಗಳು
"ಕನ್ನಡ ಚಿತ್ರರಂಗ ನನಗೆ ಅಚ್ಚುಮೆಚ್ಚು' ಎನ್ನುವ ಪ್ರಿಯಾ ಆನಂದ್, "ಕನ್ನಡದಲ್ಲೂ ಕಥೆಗಳನ್ನು ಕೇಳುತ್ತಿದ್ದೇನೆ. ನನಗೆ ಈ ಚಿತ್ರರಂಗ ಇಷ್ಟ, ಕರ್ನಾಟಕದಲ್ಲಿ ಇರುವುದು ಇಷ್ಟ. ನನಗೆ ಕನ್ನಡ ಚಿತ್ರಗಳ ಸಮಯದಲ್ಲಿ ಅದ್ಭುತ ಅನುಭವಗಳಾಗಿವೆ. ಆದರೂ ನಾನು ಕನ್ನಡದಲ್ಲಿ ಹೆಚ್ಚು ನಟಿಸುತ್ತಿಲ್ಲ ನಿಜ. ಏಕೆಂದರೆ ವರ್ಷಕ್ಕೆ ಮೂರು ಸಿನಿಮಾ ಮಾಡಿ, ಯಾವ ಪೋಸ್ಟರ್ ಯಾವ ಚಿತ್ರದ್ದು ಅಂತ ಜನ ಗೊಂದಲಕ್ಕೀಡಾಗುವ ಬದಲು ಒಳ್ಳೆ ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾಗಬೇಕು. ಅವರ ನೆನಪಿನಲ್ಲಿ ಉಳಿಯಬೇಕು. ಕನ್ನಡದಲ್ಲಿ ಕಮರ್ಷಿಯಲ್ ಹೊರತುಪಡಿಸಿ ಆ್ ಬೀಟ್, ಅಥವಾ ಬೇರೆ ರೀತಿಯ ಸಿನಿಮಾ ಮಾಡಲು ಇಷ್ಟಪಡುತ್ತೇನೆ' ಎಂದು ಹೇಳಿಕೊಳ್ಳುತ್ತಾರೆ.
ವಿನೋದಮಯ ವಿನೋದ್
ನಟ ವಿನೋದ್ ಪ್ರಭಾಕರ್ ಜತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಪ್ರಿಯಾ, "ವಿನೋದ್ ಅವರು ಸರಳವಾದರೂ ಅದ್ಭುತ ವ್ಯಕ್ತಿ. ತಾವಾಯಿತು ತಮ್ಮ ಕೆಲಸವಾಯಿತು ಅಂತ ಸುಮ್ಮನಿರುವುದಿಲ್ಲ. ಅವರು ಚಿತ್ರದ ಪ್ರತಿ ವಿಷಯದಲ್ಲೂ ಗಮನ ಹರಿಸುತ್ತಾರೆ. ಸಿನಿಮಾ ಬಗ್ಗೆ ತುಂಬ ಪ್ಯಾಷನ್ ಇರುವ ನಟ. ಚೈತನ್ಯ ನಿರ್ದೇಶನ ಹೇಗಿದೆ? ವಿನೋದ್ ತೆರೆಯನ್ನು ಹೇಗೆ ಆವರಿಸಿಕೊಳ್ಳುತ್ತಾರೆ? ಸಿನಿಮಾ ಹೇಗೆ ಮೂಡಿಬಂದಿದೆ? ಅಂತ ಜನರಲ್ಲಿ ಕುತೂಹಲವಿದ್ದರೆ, ನಮ್ಮ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ? ಎಂಬ ಕುತೂಹಲ ನನ್ನದು' ಎಂದು ನಗುತ್ತಾರೆ.