ಹರ್ಷವರ್ಧನ್ ಬ್ಯಾಡನೂರು
ನಟಿ ಮೇಘನಾ ಗಾಂವ್ಕರ್ ಇತ್ತೀಚೆಗಷ್ಟೆ ಫ್ರಾನ್ಸ್ಗೆ ಹೋಗಿದ್ದರು. ವಾಪಸ್ಸಾಗುವ ಹೊತ್ತಿಗೆ ಅವರಿಗೆ ಕಣ್ಣಿನ ಅಲರ್ಜಿಯಾಗಿತ್ತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಮೇಘನಾ, ‘ಧೂಳಿನಿಂದಲೋ ಏನೋ ಗೊತ್ತಿಲ್ಲ. ಆದರೆ, ಕಣ್ಣಿನ ಅಲರ್ಜಿಯಾಗಿತ್ತು. ವೈದ್ಯರನ್ನು ಸಂರ್ಪಸಿದೆ. ಕಣ್ಣಿಗೆ ಡ್ರಾಪ್ಸ್ ನೀಡಿದ್ದಾರೆ. ಈಗೀಗ ಚೇತರಿಸಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.
ದೇಶ ಸುತ್ತು ಇಲ್ಲವೇ ಕೋಶ ಓದು ಎಂಬ ಮಾತಿದೆ. ಆದರೆ, ನಟಿ ಮೇಘನಾ ದೇಶವನ್ನೂ ಸುತ್ತುತ್ತಾರೆ, ಕೋಶಗಳನ್ನೂ ಓದುತ್ತಾರೆ. ಆಗಾಗ ತಾವು ಹೋದ ದೇಶಗಳ ಬಗ್ಗೆ, ಓದುತ್ತಿರುವ ಪುಸ್ತಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ‘ನನಗೆ ಸಣ್ಣ ವಯಸ್ಸಿನಿಂದಲೇ ವಿದೇಶ ಪ್ರಯಾಣದ ಬಗ್ಗೆ ಹೆಚ್ಚು ಆಸೆಯಿತ್ತು. ಪ್ರಾರಂಭದಲ್ಲಿ ನಾನು ಚಿತ್ರರಂಗಕ್ಕೆ ಬರುವ ಮುನ್ನ ಶಿಯಾಮಿಕ್ ದಾವರ್ ಡಾನ್ಸ್ ಕಂಪನಿಯಲ್ಲಿ ತರಬೇತುದಾರಳಾಗಿ ಕೆಲಸ ಮಾಡುತ್ತಿದ್ದೆ. ಆಗ ಆಸ್ಟ್ರೇಲಿಯಾಗೆ ಹೋಗಿದ್ದೆ. ಅಲ್ಲಿ ಕಾಮನ್ವೆಲ್ತ್ ಗೇಮ್ಸ್ನ ಮುಕ್ತಾಯ ಸಮಾರಂಭದಲ್ಲಿ ಕಾರ್ಯಕ್ರಮ ನೀಡಿದ್ದೆವು. ಇದೀಗ ಅಂಟಾರ್ಟಿಕಾ ಹೊರತುಪಡಿಸಿ ಮಿಕ್ಕ ಎಲ್ಲ ಖಂಡಗಳನ್ನೂ ಸುತ್ತಿದ್ದೇನೆ. ಯೂರೋಪ್ ಮತ್ತು ಏಷ್ಯಾದ ಬಹುತೇಕ ದೇಶಗಳಿಗೆ ಹೋಗಿದ್ದೇನೆ. ಫ್ರಾನ್ಸ್, ನೆದರ್ಲೆಂಡ್ಸ್, ಇಟಲಿ, ಜರ್ಮನಿ, ಪ್ರಾಗ್, ಬಾಲಿ, ಇಂಡೋನೇಷ್ಯಾ, ದುಬೈ, ಅಮೆರಿಕಾ, ಲಂಡನ್, ಆಸ್ಟ್ರೇಲಿಯಾ, ಸಿಂಗಾಪುರ, ಥೈಲ್ಯಾಂಡ್ ಮುಂತಾದ ದೇಶಗಳನ್ನು ಸುತ್ತಿದ್ದೇನೆ. ಪ್ರತಿ ವರ್ಷ ಶೂಟಿಂಗ್ ಇಲ್ಲದಾಗ ಎರಡು ದೇಶಗಳಿಗೆ ಭೇಟಿ ನೀಡಬೇಕು ಅಂತ ನಿರ್ಧರಿಸಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ ಮೇಘನಾ.
ತಮಗೆ ಸೋಲೋ ಟ್ರಿಪ್ ಇಷ್ಟವೆನ್ನುವ ಅವರು, ‘ಕುಟುಂಬದ ಜತೆ, ಫ್ರೆಂಡ್ಸ್ ಜತೆಗೂ ವಿದೇಶಗಳಿಗೆ ಹೋಗಿದ್ದೇನೆ. ಆದರೆ, ನನಗೆ ಈ ಪೀಳಿಗೆಯ ಹೆಣ್ಣುಮಕ್ಕಳಂತೆ ಸೋಲೋಟ್ರಿಪ್ ಹೆಚ್ಚು ಇಷ್ಟ. ಹೊಸ ಜಾಗಕ್ಕೆ ಹೋದಾಗ ನಾವು ಹೊಸ ಆಚಾರ, ವಿಚಾರಗಳ ಬಗ್ಗೆ ತಿಳಿಯಬಹುದು. ಒಂದೊಂದು ಜಾಗವೂ ನಮ್ಮನ್ನು, ನಮ್ಮ ವ್ಯಕ್ತಿತ್ವವನ್ನು ಬದಲಿಸುತ್ತವೆ. ನಮ್ಮಲ್ಲಿ ಏನೋ ಒಂದು ಹೊಸ ಬದಲಾವಣೆ ತಂದಿರುತ್ತದೆ’ ಎಂದು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಮೇಘನಾ. ಸದ್ಯ ಅವರು ಮೂರು ಚಿತ್ರಗಳಲ್ಲಿ ಬಿಜಿ ಇದ್ದಾರೆ.
‘ರಮೇಶ್ ಅರವಿಂದ್ ಅವರ ‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಖಾಕಿ ಧರಿಸುವುದೇ ಖುಷಿಯ ವಿಷಯ. ಇಂದಿನ ಮಹಿಳೆಯನ್ನು ಪ್ರತಿನಿಧಿಸುವ ಪಾತ್ರ. ಯಾರೋ ಒಬ್ಬರು ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಡಿಸಿಪಿ ಒಬ್ಬರ ಫೋಟೋ ತೋರಿಸಿದರಂತೆ, ಅವರಿಗೆ ತಕ್ಷಣ ನಾನು ಆ ಪಾತ್ರಕ್ಕೆ ಹೋಲುತ್ತೇನೆ ಅಂತನ್ನಿಸಿ, ನನಗೆ ಶಿವಾಜಿ ಸುರತ್ಕಲ್ ಬಾಸ್ ಪಾತ್ರದಲ್ಲಿ ಅವಕಾಶ ನೀಡಿದರು. ನಂತರ ‘ಛೂ ಮಂತರ್’ ಹಾಗೂ ‘ಕರ್ವ 3’ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದೇನೆ’, ಎಂದು ಮಾಹಿತಿ ನೀಡುತ್ತಾರೆ ಮೇಘನಾ.