ನ್ಯೂಸ್

ನಾನು ನೋಡಿದಂತೆ ದರ್ಶನ್ ಆ ರೀತಿ ತಪ್ಪು ಮಾಡಲ್ಲ: ದಚ್ಚು ಸ್ಥಿತಿ ನೆನೆದು ಕಣ್ಣೀರಿಟ್ಟ ಗಿರಿಜಾ ಲೋಕೇಶ್

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಸಹಿಸಿದ್ದನು. ಹೀಗಾಗಿ ರೇಣುಕಾಸ್ವಾಮಿ ಕೊಲೆ ಮಾಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ನಟ ದರ್ಶನ್​ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಜೈಲು ಸೇರಿರುವ ಕುರಿತಾಗಿ ಸ್ಯಾಂಡಲ್​ವುಡ್​ನ ಕಲಾವಿದರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಬಗ್ಗೆ ಹಿರಿಯ ನಟಿ ಗಿರಿಜಾ ಲೋಕೇಶ್​ರವರು ತಮ್ಮ ಅಳುವನ್ನು ಹೊರ ಹಾಕಿದ್ದಾರೆ.

ಖಾಸಗಿವಾಹಿನಿ ಜತೆ ಮಾತನಾಡಿದ ಹಿರಿಯ ನಟಿ ಗಿರಿಜಾ ಲೋಕೇಶ್​ರವರು, ದರ್ಶನ್ 14 ವರ್ಷ ಇರುವಾಗಿನಿಂದ ನೋಡಿದ್ದೀನಿ. ಅವರ ಅಪ್ಪ ಸತ್ತಾಗ ದರ್ಶನ್ ಒಬ್ಬಂಟಿಯಾಗಿ ಮನೆ ನಡೆಸಿದ ರೀತಿ. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ಜವಾಬ್ದಾರಿ ಹೊತ್ತು ಅಕ್ಕನ ಮದುವೆ ಮಾಡಿಸಿದ್ದು ಎಲ್ಲಾ ನೆನಪಾಗುತ್ತದೆ ಎಂದು ಹೇಳಿದ್ದಾರೆ.

ದರ್ಶನ್ ಕನ್ನಡ ಇಂಡಸ್ಟ್ರಿಗೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾನೆ. ಅಷ್ಟೇ ದೊಡ್ಡ ಮಟ್ಟದ ಹೆಸರನ್ನೂ ಕೂಡಾ ಮಾಡಿದ್ದಾನೆ. ಈ ಘಟನೆ ಯಾಕಾಯ್ತು ಅನ್ನೋದು ಗೊತ್ತಿಲ್ಲ. ಆ ಮಗು ಸಾಕಷ್ಟು ಕಷ್ಟ ಪಟ್ಟಿದೆ. ಆದಷ್ಟು ಬೇಗ ಅವನು ಹೊರಗೆ ಬರಲಿ. ಅದೇ ನಮ್ಮ ಪ್ರಾರ್ಥನೆ ಎಂದು ಹೇಳುತ್ತಾ ಗಿರಿಜಾ ಲೋಕೇಶ್ ಭಾವುಕರಾಗಿದ್ದಾರೆ.

ಈ ಪ್ರಕರಣ ಕಾನೂನಿನ ಚೌಕಟ್ಟಿನಲ್ಲಿ ಇದೆ. ಇದರ ಬಗ್ಗೆ ನಾವು ಏನು ಮಾತನಾಡುವುದು ಸರಿಯಲ್ಲ. ಅವ್ನು ತಪ್ಪು ಮಾಡಿದ್ದನೋ ಇಲ್ವೋ ಅನ್ನೋದು ಯಾರಿಗೂ ಗೊತ್ತಿಲ್ಲ. ಚಿಕ್ಕ ವಯಸ್ಸಿನಿಂದಲೂ ತುಂಬಾ ಮುಗ್ಧ ಸ್ವಭಾವದ ಹುಡುಗ ಅವ್ನು. ನಾನು ನೋಡಿದಂತೆ ದರ್ಶನ್ ಆ ರೀತಿ ತಪ್ಪು ಮಾಡಲ್ಲ. ತಂದೆಯ ಮಾತಿಗೆ ಎಂದೂ ಎದುರು ಮಾತನಾಡದೆ ಎಲ್ಲವನ್ನು ಕೇಳುತ್ತಿದ್ದ ಎಂದು ಗಿರೀಜಾ ಲೋಕೇಶ್ ಹೇಳಿದ್ದಾರೆ.

ದರ್ಶನ್‌ ತನ್ನ ಅಕ್ಕನ ಮದುವೆ ಮಾಡಿದಾಗ ಹೇಗಿದ್ದ, ತಂದೆ ನಿಧನ ಹೊಂದಿದಾಗ ಹೇಗಿದ್ದ, ಏನೆಲ್ಲಾ ಕಷ್ಟ ಪಟ್ಟಿದ್ದ ಅಂತ ನಾನು ಕಣ್ಣಾರೆ ನೋಡಿದ್ದೇನೆ. ಚಿತ್ರರಂಗಕ್ಕೆ ಕಾಲಿಡುವಾಗ ಯಾವ ಬಗೆಯ ಅವಮಾನಗಳನ್ನ ಅನುಭವಿಸಿ, ಅದನ್ನೆಲ್ಲಾ ದಾಟಿ ಹೇಗೆ ಮುಂದೆ ಬಂದಿದ್ದಾನೆ. ಹೇಗೆ ತನ್ನ ದಾರಿಯಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾನೆ ಎಂಬುದನ್ನು ನೋಡಿದ್ದೇನೆ. ಹೀಗಾಗಿ ದರ್ಶನ್ ನಿರಪರಾಧಿಯಾಗಿ ಬೇಗ ಹೊರಗೆ ಬರಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.