ನ್ಯೂಸ್

ಅಪೂರ್ವ ಸಂಗಮ: ನಟಿಯ ನಟನೆಯ ಐದು ಚಿತ್ರಗಳು ಬಿಡುಗಡೆಗೆ ಸಿದ್ಧ

ಶಿವ ಸ್ಥಾವರಮಠ ಬೆಂಗಳೂರು
ರವಿಚಂದ್ರನ್‌ಗೆ ಜೋಡಿಯಾಗಿ ‘ಅಪೂರ್ವ’ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡಿದ ನಟಿ ಅಪೂರ್ವ. ಬಳಿಕ ಅವರು ಹಿಂದಿರುಗಿ ನೋಡಿಲ್ಲ. ‘ವಿಕ್ಟರಿ 2’, ‘ಕೃಷ್ಣ ಟಾಕೀಸ್’, ‘ಪೆಂಟಗನ್’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದು, ‘ಓ ನನ್ನ ಚೇತನಾ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಅವರು ನಟಿಸಿರುವ ಐದು ಸಿನಿಮಾಗಳ ಚಿತ್ರೀಕರಣ ರಿಲೀಸ್‌ಗೆ ರೆಡಿಯಿವೆ. ಈ ಬಗ್ಗೆ ಅಪೂರ್ವ, ‘ಐದು ಚಿತ್ರಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಎಲ್ಲ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಆರ್.ಬಾಲಚಂದ್ರ ನಿರ್ದೇಶನದ ‘ಕಣಂಜಾರು’ನಲ್ಲಿ ಕೆಲವೇ ದೃಶ್ಯಗಳಲ್ಲಿದ್ದರೂ, ಕಥೆಯಲ್ಲಿ ನನ್ನ ಪಾತ್ರವೇ ಪ್ರಮುಖ. ಇರುವ ಮೂರು ಸಾಂಗ್‌ಗಳಲ್ಲಿ ಒಂದು ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ.

‘ರಾನಿ’ಯಲ್ಲಿ ಸೂಪರ್ ಕಾಪ್: ಕಿರಣ್‌ರಾಜ್ ನಟನೆಯ ‘ರಾನಿ’ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿದೆ. ಇಲ್ಲಿ ಅಪೂರ್ವ ಸೂಪರ್ ಕಾಪ್ ಆಗಿ ಮಿಂಚಿದ್ದಾರೆ. ‘‘ರಾನಿ’ಯಲ್ಲಿ ಪೊಲೀಸ್ ಪಾತ್ರ ನಿರ್ವಹಿಸಿರುವುದು ಚಾಲೆಂಜಿಂಗ್ ಆಗಿತ್ತು. ಈಗಾಗಲೇ ‘ಭೀಮ’ ಸಿನಿಮಾದಲ್ಲಿ ಪ್ರಿಯಾ ಶಠಮರ್ಷಣ ಅಭಿನಯ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಅಂತೆಯೇ, ನನ್ನ ಅಭಿನಯ ಕೂಡ ಎಲ್ಲರಿಗೂ ಇಷ್ಟವಾಗಬಹುದು. ಪಾತ್ರಕ್ಕಾಗಿ ರಗಡ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಜಿಮ್‌ನಲ್ಲಿ ಬೆವರು ಹರಿಸಿ, ಸಾಕಷ್ಟು ರಿಹರ್ಸಲ್ ಮಾಡಿದ್ದೇನೆ. ಮೊದಲಿಗೆ ಪೊಲೀಸ್ ಡ್ರೆಸ್ ಧರಿಸಿದಾಗ ಭಯ ಎನಿಸಿತು. ಒಂದೆರೆಡು ದಿನಗಳ ಬಳಿಕ ಹೊಂದಿಕೊಂಡೆ’ ಎಂದು ಮಾಹಿತಿ ನೀಡುತ್ತಾರೆ.

ರವಿಗೆ ‘ಗೌರಿ’ ಜೋಡಿ: ‘ಅಪೂರ್ವ’ ಬಳಿಕ ರವಿಚಂದ್ರನ್ ಮತ್ತು ಅಪೂರ್ವ ಮತ್ತೆ ‘ಗೌರಿಶಂಕರ’ ಮೂಲಕ ಒಂದಾಗಿದ್ದು, ‘ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ರವಿಚಂದ್ರನ್ ಪತ್ನಿ ಪಾತ್ರ ನಿರ್ವಹಿಸುತ್ತಿದ್ದೇನೆ. ನನಗೆ ‘ಅಪೂರ್ವ’ದಲ್ಲಿ ನಟನೆ ಕಲಿಸಿದವರು ರವಿಚಂದ್ರನ್. ಈಗ ಆ್ಯಕ್ಟಿಂಗ್ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಜತೆಗೆ ಚಂದನ್ ಶೆಟ್ಟಿ ಅಭಿನಯದ ‘ಸೂತ್ರಧಾರಿ’, ಅಭಿಮನ್ಯು ಕಾಶಿನಾಥ್‌ರ ‘ಸೂರಿ ಲವ್ಸ್ ಸಂಧ್ಯಾ’ ಶೂಟಿಂಗ್ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಸಿದ್ಧವಾಗಿವೆ. ಜತೆಗೆ ಎರಡು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.


ಕನ್ನಡ ಚಿತ್ರರಂಗ ಬೆಸ್ಟ್ : ಮಲಯಾಳಂ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿಯರ ಮೇಲಿನ ಲೈಂಗಿಕ ಕಿರುಕುಳ ಆರೋಪದ ಕುರಿತು ಅಪೂರ್ವ, ‘ಬೇರೆ ಭಾಷೆಯ ಚಿತ್ರರಂಗದಲ್ಲಿ ನಾನು ಕೆಲಸ ಮಾಡಿಲ್ಲ. ಹಾಗಾಗಿ ಅಲ್ಲಿನ ವ್ಯವಸ್ಥೆ ಕುರಿತು ನನಗೆ ಮಾಹಿತಿಯಿಲ್ಲ. ಕನ್ನಡ ಚಿತ್ರರಂಗದಲ್ಲಿ ನಟಿಯರನ್ನು ಗೌರವದಿಂದ ಕಾಣುತ್ತಾರೆ. ಆ ರೀತಿಯ ವಾತಾವರಣ ಇಲ್ಲಿ ಇಲ್ಲ’ ಎಂದು ಖಡಕ್ ಉತ್ತರ ನೀಡುತ್ತಾರೆ.