ನ್ಯೂಸ್

ನೋವಿನಲ್ಲೂ ನಗು ಹಂಚಿದ ಒನ್​ ಅಂಡ್​ ಓನ್ಲಿ 'ವರು'! ಅಪರ್ಣಾರ ಕೊನೆಯ ಕ್ಷಣಗಳನ್ನು ನೆನೆದರೆ ಕಣ್ತುಂಬಿ ಬರುತ್ತೆ

ಬೆಂಗಳೂರು: 'ಮಸಣದ ಹೂವು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ, ನಿರೂಪಕಿ ಅಪರ್ಣ ವಸ್ತಾರೆ (58) ಇಂದು ತಮ್ಮ ಕುಟುಂಬಸ್ಥರು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ​ಅಚ್ಚ ಕನ್ನಡದ ಸ್ವಚ್ಛ ಧ್ವನಿಯಾಗಿದ್ದ ಅಪರ್ಣ ನಿನ್ನೆ (ಜುಲೈ 11) ತಡರಾತ್ರಿ ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ. ಕ್ಯಾನ್ಸರ್​ ವಿರುದ್ಧ ಹೋರಾಟ ನಡೆಸುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ನಿಧನರಾದರು.

ಯಾವುದೇ ಸಾಂಸ್ಕೃತಿಕ ಕಾರ್ಯಕಮ ಇರಲಿ, ಸರ್ಕಾರಿ ಕಾರ್ಯಕ್ರಮಗಳೇ ಆಗಿರಲಿ ಅಲ್ಲಿ ಅಪರ್ಣ ಅವರ ಉಪಸ್ಥಿತಿ ಇರಬೇಕಿತ್ತು. ತಮ್ಮ ಸ್ವಚ್ಛ ಕನ್ನಡದಲ್ಲಿ ಅತಿಥಿಗಳನ್ನು ಆಗಮಿಸುತ್ತಿದ್ದ ಪರಿ, ವೇದಿಕೆಗೆ ಅವರು ತರುತ್ತಿದ್ದ ಕಳೆ ನೆರೆದಿದ್ದವರನ್ನು ಖುಷಿಪಡಿಸುತ್ತಿತ್ತು. ಕೇವಲ ತಮ್ಮ ಧ್ವನಿ ಹಾಗೂ ಸ್ಪಷ್ಟ ಕನ್ನಡ ಪದಗಳ ಬಳಕೆಯಿಂದಲೇ ಎಲ್ಲರ ಗಮನಸೆಳೆದಿದ್ದ ಅಪರ್ಣಾ ಅವರು, ಕನ್ನಡ ಭಾಷೆಗೆ ಕೊಡುತ್ತಿದ್ದ ಗೌರವ, ಪ್ರಾಶಸ್ತ್ಯ ಅಪಾರ, ಅಗಾಧ. ಇವರ ಮಾತುಗಳನ್ನು ಕೇಳುತ್ತಿದ್ದವರಿಗೆ ಕನ್ನಡ ಕಲಿಯುವ ಆಸಕ್ತಿ, ಮತ್ತಷ್ಟು ಹೆಚ್ಚುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದ್ರೆ, ಇಂದು ಅವರು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ಅತೀವ ದುಃಖವನ್ನು ತಂದೊಡ್ಡಿದೆ.

ಈಗಲೂ ಸಹ ಅನೇಕರಿಗೆ ಇದು ಶಾಕಿಂಗ್ ಸಂಗತಿಯಾಗಿದ್ದು, ಅಪರ್ಣ ಅವರಿಗೆ ಕ್ಯಾನ್ಸರ್​ ಇತ್ತು ಎಂಬುದನ್ನು ನಿಜ ಎಂದು ಭಾವಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ, ಈ ಹಿಂದೆ ಎಲ್ಲಿಯೂ ಅವರು ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿರಲಿಲ್ಲ. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರು ಯಾವ ಸಂದರ್ಶನ ಅಥವಾ ಮಾಧ್ಯಮಗಳ ಮುಂದೆಯೂ ಈ ಕುರಿತು ಮಾಹಿತಿ ಹಂಚಿಕೊಂಡಿರಲಿಲ್ಲ. ಇದು ಅವರಿಂದಲೇ ಆಗಿರಬಹುದು ಅಥವಾ ಅವರ ಆಪ್ತ ಮೂಲಗಳಿಂದಲೇ ಆಗಿರಬಹುದು. ಯಾರಿಗೂ ಕೂಡ ಗೊತ್ತಿರಲಿಲ್ಲ. ಆದ್ರೆ, ತಡರಾತ್ರಿ ಅಪರ್ಣ ಅವರು ಕ್ಯಾನ್ಸರ್​ ಖಾಯಿಲೆಗೆ ತುತ್ತಾದರು ಎಂಬ ಸಂಗತಿ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಇದು ಸುಳ್ಳು ಸುದ್ದಿಯೇ ಇರಬಹುದು ಎಂದೇ ಅನಿಸಿತು.

ಕಳೆದ ವರ್ಷಗಳಲ್ಲಿ ಅಪರ್ಣ ಅವರು ಯಾವುದೇ ಖಾಸಗಿ ಕಾರ್ಯಕ್ರಮ ಆಗಿರಲಿ ಅಥವಾ ಸಂದರ್ಶನಗಳಲ್ಲಿ ಭಾಗಿಯಾಗಿಲ್ಲ. ಮಾಧ್ಯಮಗಳಿಂದ ಬಹಳ ದೂರ ಉಳಿದಿದ್ದರು. ಇದರ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಈ ಹಿಂದೆ ಖಾಸಗಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದವರು, ಏಕಾಏಕಿ ಅದೆಲ್ಲದರಿಂದ ಹಿಂದೆ ಉಳಿದರು. ಇದು ಕೆಲವರಿಗೆ ಯಾಕೆ ಎಂಬ ಪ್ರಶ್ನೆ ಮೂಡಿದ್ದೇ ಆದರೂ ತಿಳಿದುಕೊಳ್ಳಲು ಅಸಾಧ್ಯವಾಯಿತು. ಆದ್ರೆ, ತಾವು ಕ್ಯಾನ್ಸರ್​ ರೋಗದಿಂದ ಬಳಲುತ್ತಿರುವುದು ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು. ಈ ಸಂಗತಿಯನ್ನು ತಮ್ಮ ಕುಟುಂಬಸ್ಥರು ಮತ್ತು ಆಪ್ತರೊಂದಿಗೆ ಅವರು ಗೌಪ್ಯವಾಗಿ ಇರಿಸಿದ್ದರು.

ಕ್ಯಾನ್ಸರ್​ 4ನೇ ಸ್ಟೇಜ್​ನಿಂದ ಬಳಲುತ್ತಿದ್ದ ಅಪರ್ಣ ಅವರನ್ನು ಬಹಳ ಖುಷಿಯಿಂದ ನೋಡಿಕೊಳ್ಳುತ್ತಿದ್ದ ಅವರ ಪತಿ ನಾಗರಾಜು ವಸ್ತಾರೆ, ಪತ್ನಿಗೆ ಇಷ್ಟವಾದ ಸ್ಥಳಗಳನ್ನು ತೋರಿಸುತ್ತ, ಅಲ್ಲಿಗೆ ಅವರನ್ನು ಖುದ್ದಾಗಿ ಕರೆದೊಯ್ದು, ಆದಷ್ಟು ಅವರ ಬಯಕೆಗಳನ್ನು ಈಡೇರಿಸಿದ್ದಾರೆ ಎಂಬುದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ಫೋಟೋಗಳು ಮತ್ತು ವಿಡಿಯೋಗಳು ಹೇಳುತ್ತಿವೆ. ಕ್ಯಾನ್ಸರ್​ನಿಂದ ಕೂದಲು ಕಳೆದುಕೊಂಡಿದ್ದ ಅಪರ್ಣ ಅವರ ಫೋಟೋಗಳು ಕೂಡ ಭಾರೀ ಆಶ್ಚರ್ಯವನ್ನುಂಟುಮಾಡಿದೆ. ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಧಾರವಾಹಿ ಕಲಾವಿದರು, ಸಿನಿ ಮಿತ್ರರೊಂದಿಗೆ ಖುಷಿ ಖುಷಿಯಿಂದಲೇ ಮಾತನಾಡಿರುವ ವಿಡಿಯೋಗಳು ಹರಿದಾಡುತ್ತಿವೆ.

ತಮ್ಮ ಕುಟುಂಬ, ಪ್ರೀತಿ ಪಾತ್ರರು, ಅಭಿಮಾನಿಗಳನ್ನು ಅಗಲಿ ಹೋಗುವೆ ಎಂಬ ಕಟುಸತ್ಯ ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು. ಪತಿ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಕ್ಷಣ ಖುಷಿಯಿಂದ ಕಳೆದ ಅಪರ್ಣ ಅವರು, ಮನದಲ್ಲಿ ನೂರು ನೋವಿದ್ದರೂ ಸಹ ನಗು ನಗುತಲೇ ಎಲ್ಲರೊಂದಿಗೆ ತಮ್ಮ ಕಡೆಯ ಕ್ಷಣಗಳನ್ನು ಕಳೆದು, ಇಂದು ಅಂತಿಮ ವಿದಾಯ ಹೇಳಿದ್ದಾರೆ. ಈ ಕ್ಷಣಕ್ಕೂ ಇದು ನಿಜ ಎಂದು ಅನೇಕರಿಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ಯಾನ್ಸರ್​ ಖಾಯಿಲೆಗೆ ತುತ್ತಾದರು ಎಂಬುದು ನಿಜಕ್ಕೂ ಅರಗಿಸಿಕೊಳ್ಳಲಾಗದ ಸಂಗತಿ.