| ಹರ್ಷವರ್ಧನ್ ಬೆಂಗಳೂರು
‘ಬಾಹುಬಲಿ’ ಮತ್ತು ‘ಭಾಗಮತಿ’ ಚಿತ್ರಗಳ ಬಳಿಕ ನಾನೇ ವೈಯಕ್ತಿಕ ಕಾರಣ ಗಳಿಂದ ಬ್ರೇಕ್ ತೆಗೆದುಕೊಂಡಿದ್ದೆ. ನಂತರ ‘ನಿಶ್ಶಬ್ದಂ’ ಚಿತ್ರದಲ್ಲಿ ಅವಕಾಶ ದೊರೆಯಿತು. 2 ತಿಂಗಳಲ್ಲಿ ಸಿನಿಮಾ ಪೂರ್ಣ ಗೊಳಿಸುತ್ತೇವೆ ಎಂದ ಕಾರಣ ಒಪ್ಪಿಕೊಂಡಿದ್ದೆ.
‘ಮಿಸ್ ಶೆಟ್ಟಿ, ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದ ಕಥೆ ಕೇಳಿದ್ದು 2019ರಲ್ಲಿ. ಕಥೆ ಇಷ್ಟವಾದ ಕಾರಣ ಒಪ್ಪಿಕೊಂಡೆ. ನಂತರ ಕರೊನಾ ಕಾರಣ ತಡವಾಗಿತ್ತು. ಕಳೆದ ವರ್ಷ ಚಿತ್ರೀಕರಣ ಪ್ರಾರಂಭವಾಯಿತು. ಈಗ ರಿಲೀಸ್ಗೆ ರೆಡಿಯಿದೆ. ಇದೊಂದು ಲೈಟ್ ಹಾರ್ಟಡ್ ಕಾಮಿಡಿ ಜತೆಗೆ ಎಮೋಷನ್ಸ್ ಇರುವ ಚಿತ್ರ.
ಇದು ಶೆಫ್ ಕುರಿತ ಸಿನಿಮಾ ಮಾತ್ರವಲ್ಲ, ಆಕೆಯ ಜೀವನ, ಜರ್ನಿ ಎಲ್ಲವೂ ಸೇರಿದ ಕಥೆ. ಮನೆಯಲ್ಲಿ ಹಸಿವಾದರೆ ಅಡುಗೆ ಮಾಡಿಕೊಡುತ್ತೇನೆ ಅಷ್ಟೆ. ಆದರೆ, ಥರಹೇವಾರಿ ಖಾದ್ಯಗಳು ಗೊತ್ತಿಲ್ಲ. ನನಗಿಂತ ಅಮ್ಮ ಒಳ್ಳೆ ಕುಕ್.
ಕನ್ನಡ ಚಿತ್ರಗಳನ್ನು ಮಾಡಬೇಕು ಅಂತ ನನಗೂ ಆಸೆಯಿದೆ. ಈ ವರ್ಷ ಮಲಯಾಳಂ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಕಥೆ ಚೆನ್ನಾಗಿತ್ತು ಹೀಗಾಗಿ ಒಪ್ಪಿಕೊಂಡೆ. ಅದೇ ರೀತಿ ಉತ್ತಮ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟಿಸಲು ನಾನಂತೂ ರೆಡಿಯಿದ್ದೇನೆ.
ಕಥೆ ಕೇಳುವಾಗ ಈ ಟೈಟಲ್ ಇರಲಿಲ್ಲ. ಸಿನಿಮಾ ಕುರಿತು ನಿರ್ದೇಶಕ ಮಹೇಶ್ ಬಾಬು ಮತ್ತು ನಿರ್ವಪಕರ ಜತೆ ರ್ಚಚಿಸುವಾಗ ನಾಯಕ ಮತ್ತು ನಾಯಕಿ ಇಬ್ಬರ ನಡುವಿನ ಕಥೆಯಿದು. ಹೆಸರನ್ನೇ ಏಕೆ ಬಳಸಬಾರದು ಅಂತ ‘ಮಿಸ್ ಶೆಟ್ಟಿ, ಮಿಸ್ಟರ್ ಪೊಲಿಶೆಟ್ಟಿ’ ಎಂದು ಟೈಟಲ್ ಫಿಕ್ಸ್ ಮಾಡಲಾಯಿತು. ನಾನಿಲ್ಲಿ ಶೆಫ್ ಅನ್ವಿತಾ ರಾವಾಲಿ ಶೆಟ್ಟಿ ಪಾತ್ರದಲ್ಲಿ ನಟಿಸಿದ್ದೇನೆ. ನವೀನ್ ಸ್ಟ್ಯಾಂಡಪ್ ಕಾಮಿಡಿಯನ್ ಸಿದ್ದು ಪೊಲಿಶೆಟ್ಟಿ ಪಾತ್ರದಲ್ಲಿ ನಟಿಸಿದ್ದಾರೆ. ನವೀನ್ ಉತ್ತಮ ನಟ, ತುಂಬ ನ್ಯಾಚುರಲ್ ಆಗಿ ನಟಿಸುತ್ತಾರೆ.