ಮೈಸೂರು: ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಕುಟುಂಬದೊಂದಿಗೆ ನಾಗರಹೊಳೆಯಲ್ಲಿ ಸಫಾರಿ ಮಾಡಿದ್ದಾರೆ. ತಮ್ಮ ಮಕ್ಕಳಿಗೆ ಕಾಡಿನಲ್ಲಿ ಪ್ರಾಣಿಗಳನ್ನು ತೋರಿಸುತ್ತಾ, ಪ್ರವಾಸ ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ಕಾಡಿನಲ್ಲಿ ಜಿಂಕೆ, ಕರಡಿ, ಆನೆ ಎಲ್ಲವೂ ಹತ್ತಿರದಿಂದ ಕಾಣಸಿಕ್ಕಿತು. ಮಕ್ಕಳು ಸಫಾರಿಯನ್ನು ಸಂಭ್ರಮಿಸಿದರು. ಆದರೆ ಹುಲಿ ಕಾಣಸಿಕ್ಕಿಲ್ಲ. ಹೀಗಾಗಿ ಸ್ವಲ್ಪ ಬೇಜಾಯ್ತು' ಎಂದು ಹೇಳಿದ್ದಾರೆ.
ಯಶ್ ಸಿನಿಮಾ ಕೆಲಸಗಳನ್ನು ಬದಿಗಿಟ್ಟು, ನಾಗರಹೊಳೆಯಲ್ಲಿ ಸತತ ಮೂರು ದಿನ ಸಫಾರಿ ಮಾಡಿದ್ದಾರೆ. 'ಬೆಳಗ್ಗಿನಿಂದಲೇ ಮಳೆಯಾಗುತ್ತಿರುವುದರಿಂದ ಇವತ್ತು ಸಫಾರಿ ಮಾಡಿಲ್ಲ. ಮುಂದೊಂದು ದಿನ ಮತ್ತೆ ಕಾಡಿನಲ್ಲಿ ಸುತ್ತಾಡಿದರಾಯ್ತು ಎಂದು ನಿರ್ಧರಿಸಿದೆವು' ಎಂದರು.
ನಟ ಯಶ್ ಕುಟುಂಬ ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಕರೊನಾ ಕಾರಣದಿಂದ ಕೆಲ ವರ್ಷಗಳಿಂದ ಇಲ್ಲಿಗೆ ಬಂದಿರಲಿಲ್ಲ. ಇದೀಗ ಮನೆ ದೇವರ ದರ್ಶನಕ್ಕಾಗಿ ಬಂದಿದ್ದೇವೆ. ಯಾವುದೇ ವಿಶೇಷ ಹರಕೆ ಇರಲಿಲ್ಲ' ಎಂದರು.
ಮನೆ ದೇವರ ಸನ್ನಿಧಿಯಲ್ಲಿ ಇದ್ದುಕೊಂಡು ಸುಖಾಸುಮ್ಮನೆ ಮಾತನಾಡುವುದಿಲ್ಲ. ಶ್ರೀಘ್ರದಲ್ಲೇ ಮುಂದಿನ ಸಿನಿಮಾ ಅನೌನ್ಸ್ ಮಾಡುತ್ತೇವೆ. ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಹೀಗಿರುವಾಗ ಅವರು ಕೊಡುವ ಹಣಕ್ಕೆ ನ್ಯಾಯ ಒದಗಿಸುವಂತೆ ಸಿನಿಮಾ ಮಾಡಬೇಕು. ನಾನು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ, ಸಿನಿಮಾಗಾಗಿ ನಿಂತರ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
'ನಾನು ಇರುವ ಕಡೆಗೆ ಎಲ್ಲರನ್ನೂ ಕರೆಸಿಕೊಂಡಿದ್ದು, ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ' ಎನ್ನುತ್ತಾ ಯಶ್ ಬಾಲಿವುಡ್‌ಗೆ ಹೋಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು.