- ಥಂಗಲಾನ್, ಧೀರ ವೀರ ಶೂರನ್ ಸದ್ದು ಮಾಡದ ಎಫೆಕ್ಟ್
- ವಿಕ್ರಮ್ 20 ಕೋಟಿಗೆ ಸಂಬಳ ಇಳಿಕೆ, ಚಿತ್ರದ ಲಾಭಾಂಶದಲ್ಲಿ ಬೇಡಿಕೆ
- ಹೆಚ್ಚಿಸಿಕೊಳ್ಳುವವರ ಮಧ್ಯೆ, ಸ್ಯಾಲರಿ ಇಳಿಸಿಕೊಂಡ ನಟ
ಒಮ್ಮೆ ಸಂಭಾವನೆ ಹೆಚ್ಚಿಸಿಕೊಂಡ ಕಲಾವಿದರು ಮುಂದೆ ಸಾಲು ಸಿನಿಮಾಗಳು ಸೋತರೂ ಸ್ಯಾಲರಿ ಕಡಿಮೆ ಮಾಡಿಕೊಳ್ಳುವುದು ದೂರದ ಮಾತು. ಹೆಚ್ಚಿಸಿಕೊಳ್ಳದಿದ್ದರೂ ಅದೇ ಸಂಭಾವನೆಯಲ್ಲಿ ಮುಂದುವರಿಯುತ್ತಾರೆ. ಆದರೆ, ಈ ಮಾತು ತಮಿಳು ನಟ ವಿಕ್ರಮ್‌ಗೆ ಅನ್ವಯಿಸುವುದಿಲ್ಲ. ಯಾಕೆಂದರೆ ಅವರ 63ನೇ ಚಿತ್ರಕ್ಕೆ ಗಣನೀಯವಾಗಿ ಸಂಭಾವನೆಯನ್ನು ಇಳಿಕೆ ಮಾಡಿಕೊಂಡಿದ್ದಾರೆ. ‘ಪೊನ್ನಿಯನ್ ಸೆಲ್ವನ್’ ಸರಣಿ ಬಳಿಕ ತೆರೆಕಂಡ ವಿಕ್ರಮ್ ಅಭಿನಯದ ‘ಥಂಗಲಾನ್’, ‘ವೀರ ಧೀರ ಶೂರನ್ ಭಾಗ 2’ ಚಿತ್ರಗಳು ಅವರಿಗೆ ದೊಡ್ಡಮಟ್ಟದಲ್ಲಿ ಕೈಹಿಡಿಯಲಿಲ್ಲ. ಸದ್ಯ ಸೋಲಿನ ಪೆಟ್ಟು ವಿಕ್ರಮ್‌ಗೆ ತಟ್ಟಿದ್ದು, ಇತ್ತೀಚಿನ ಸಿನಿಮಾ ಮಾರುಕಟ್ಟೆ ಪರಿಸ್ಥಿತಿ ಅರ್ಥ ಮಾಡಿಕೊಂಡಿರುವ ಅವರು ಸಂಭಾವನೆಯನ್ನು 20 ಕೋಟಿ ರೂ. ಗೆ ಇಳಿಕೆ ಮಾಡಿಕೊಂಡಿದ್ದಾರೆ. ‘ಥಂಗಲಾನ್’ ಸಮಯದಲ್ಲಿ ವಿಕ್ರಮ್ 30ರಿಂದ 35 ಕೋಟಿ ರೂ.ವರೆಗೂ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ, ಸಾಲು ಸೋಲಿನಿಂದ ಇದೀಗ 18 ಕೋಟಿಯಿಂದ 20 ಕೋಟಿ ರೂ. ಗೆ ಇಳಿಸಿಕೊಂಡಿದ್ದು, ಜತೆಗೆ ರಿಲೀಸ್ ಬಳಿಕ ಚಿತ್ರದ ಲಾಭಾಂಶದಲ್ಲಿ ಪಾಲು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ವಿಕ್ರಮ್ ನಟನೆಯ 63ನೇ ಚಿತ್ರಕ್ಕೆ ಇನ್ನೂ ಟೈಟಲ್ ೋಷಣೆಯಾಗಿಲ್ಲ. ಆನಂದ್ ಶಂಕರ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಇರುಮುಗನ್’ (2016) ತೆರೆಕಂಡ ಹತ್ತು ವರ್ಷಗಳ ಬಳಿಕ ಆನಂದ್-ವಿಕ್ರಮ್ ಈ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್‌ಗೆ ಮಲಯಾಳಂನ ‘ಸರ್ವಂ ಮಾಯಾ’ ಖ್ಯಾತಿಯ ರಿಯಾ ಶಿಬು ಜೋಡಿಯಾಗಿದ್ದಾರೆ. -ಏಜೆನ್ಸೀಸ್