Dr Vishnuvardhan: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡ ಚಿತ್ರರಂಗದ ದಿಗ್ಗಜ ನಟ, 'ಸಾಹಸ ಸಿಂಹ' ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ ಕ್ರಮಕ್ಕೆ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗದ ಗಣ್ಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ನಟ ಕಿಚ್ಚ ಸುದೀಪ್, ತಮ್ಮ ಅಧಿಕೃತ ಜಾಲತಾಣ ಖಾತೆಯಲ್ಲಿ ಭಾವುಕ ನುಡಿಯನ್ನು ಹಂಚಿಕೊಂಡಿದ್ದಾರೆ.
"'ಸಾಹಸ ಸಿಂಹ' ವಿಷ್ಣುವರ್ಧನ್ ಅಂದರೆ ಅದು ಎಂದಿಗೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನು ಒಡೆದು ಹಾಕಿರುವುದು ಗೊತ್ತಾಯಿತು. ನಾವು ವರ್ಷಾನುಗಟ್ಟಲೇ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನು ಒಡೆದರೆ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ಈಗ ನನಗಾಗಿದೆ. ಇದು ಹೈಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಎಂದು ಹೇಳ್ತಾರೆ. ಆದರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ನೇತೃತ್ವದಲ್ಲಿ, ವಿಷ್ಣು ಅವರ ಸ್ಮಾರಕವನ್ನು ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧಪಟ್ಟ ಮಂತ್ರಿಗಳಿಗೆ ಕೂಡ ಹೇಳಿದೆವು" ಎಂದಿದ್ದಾರೆ.
"ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ ಗೊತ್ತಿಲ್ಲ. ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನು ಗೌರವಿಸುವುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈಕೋರ್ಟ್ ಕೂಡ ಆದೇಶ ಹೊರಡಿಸಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನು ಖರೀದಿ ಮಾಡಿರುವರೋ, ಅವರ ಮನವೊಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ" ಎಂದು ಹೇಳಿದ್ದಾರೆ.
"ಸರ್ಕಾರ ಮಧ್ಯಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ನಾನು ತಯಾರಿದ್ದೀನಿ. ಇಲ್ಲಿ ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿಯೇ ಹೊರತು ಕಿಚ್ಚನಾಗಿ ಅಲ್ಲ. ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಲೀನವಾಗಬೇಕು. ನಾವು ಪ್ರಕೃತಿಗೆ ಸಂಬಂಧ ಪಟ್ಟವರು ಅಂತ ಹೇಳುತ್ತಿದ್ದರು. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು" ಎಂದಿದ್ದಾರೆ.
"ವಿಷ್ಣುವರ್ಧನ್ ಅಂತಹ ಒಬ್ಬ ಮೇರೂ ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗವಿಲ್ಲ ಎಂದರೆ ನಿಜಕ್ಕೂ ಇದು ಅತ್ಯಂತ ಖಂಡನೀಯ. ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದ್ದಂತಹ ಒಂದು ಗಣಪತಿ ದೇವಸ್ಥಾನವೂ ಈಗಿಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ?" ಎಂದು ಪ್ರಶ್ನಿಸಿದ್ದಾರೆ.
"ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ. ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗುವೆ. ಅದಕ್ಕೊಂದು ಅವಕಾಶ ಮಾಡಿಕೊಡಿ. ವಿಷ್ಣು ಸರ್ ಸದಾ ನಮ್ಮ ಎದೆಯೊಳಗೆ ಇದ್ದಾರೆ. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಎಂದು ಈ ಮೂಲಕ ನಾನು ಮನವಿ ಮಾಡುತ್ತೇನೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.