45 
ನ್ಯೂಸ್

Shivarajkumar Interview - ಹುಡುಗಿ ಲುಕ್​, ಕಿಚ್ಚನ ಜತೆ ಕ್ಲ್ಯಾಶ್​, ದರ್ಶನ್​ ಪುತ್ರನ ಭೇಟಿ ಬಗ್ಗೆ ಮಾತು

ಪ್ರಮುಖ ಮುಖ್ಯಾಂಶಗಳು

  • ಕ್ರಿಸ್ಮಸ್​ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸಾಲು ರಜೆಗಳಿರುವ ಕಾರಣ, ಎಷ್ಟೇ ಚಿತ್ರಗಳು ರಿಲೀಸ್​ ಆದರೂ, ಸಮಸ್ಯೆಯಿಲ್ಲ
  • ಪಾತ್ರದ ವಿಷಯ ಬಂದಾಗ ಇಮೇಜ್​ ನೋಡಬಾರದು ಎಂದ ಶಿವಣ್ಣ
  • "45' ಸಿನಿಮಾ ಖಂಡಿತ ನಿರಾಸೆ ಮಾಡುವುದಿಲ್ಲ ಎಂಬ ಗ್ಯಾರಂಟಿ ಕೊಡುತ್ತೇನೆ
  • ನಾನು ಶೂಟಿಂಗ್​ ಮಾಡುತ್ತಿದ್ದೆ. ವಿನೀಶ್​ ಅಲ್ಲೆ ನಿಂತಿದ್ದ. ಸಡನ್ನಾಗಿ ನೋಡಿದೆ ನನಗೆ ಬೇಸರವಾಯಿತು.
Shivarajkumar Interview - ಶಿವರಾಜಕುಮಾರ್​, ಉಪೇಂದ್ರ, ರಾಜ್​ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ವರ್ಷದ ಬಹುನಿರೀತ ಚಿತ್ರಗಳಲ್ಲಿ ಒಂದಾದ "45' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರವನ್ನು "ಗಾಳಿಪಟ 1' ಖ್ಯಾತಿಯ ರಮೇಶ್​ ರೆಡ್ಡಿ ನಿರ್ಮಿಸಿದ್ದಾರೆ. ಸಿನಿಮಾ ಶುಕ್ರವಾರ (ಡಿ. 25) ಪ್ಯಾನ್​ ಇಂಡಿಯಾ ತೆರೆಗೆ ಬರಲಿದ್ದು, ಇದೇ ಖುಷಿಯಲ್ಲಿ ನಟ ಶಿವರಾಜಕುಮಾರ್​ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ಟ್ರೇಲರ್​ಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ ಬಗ್ಗೆ, "ನಾವೇನೋ ಮಾಡಿರುತ್ತೇವೆ. ಆದರೆ, ಅದನ್ನು ಜನ ಮೆಚ್ಚಿದಾಗ ಅದಕ್ಕೊಂದು ಅರ್ಥ ಸಿಗುತ್ತದೆ. ಅರ್ಜುನ್​ ಸರ್ಜ ಮೊದಲು ಕಥೆ ಹೇಳಿದಾಗಲೇ ನನಗೆ ಆಶ್ಚರ್ಯವಾಗಿತ್ತು. ತೆರೆಯ ಮೇಲೆ ಹೇಗೆ ಮೂಡಿಬರಬಹುದು ಎಂಬ ಕುತೂಹಲವೂ ಇತ್ತು. ಚಿತ್ರದಲ್ಲಿ ಒಂದು ವಿಶೇಷತೆ ಅಂತೂ ಇದೆ. ಸಿನಿಮಾ ನೋಡಿದ ಜನರಿಗೆ ಇದೇ ಅಲ್ಲವೇ ಜೀವನ, ಇದಲ್ಲವೇ ಜೀವನದ ಹಾದಿ ಅಂತ ಅನ್ನಿಸದೇ ಇರದು. ಅಷ್ಟು ಆಳವಾದ ಅರ್ಥವಿದೆ. ಮನರಂಜನಾತ್ಮಕ ಪಾಠವಿದೆ. ಅರ್ಜುನ್​ ಅಂತಹ ಒಂದು ಲೋಕವನ್ನೇ ಸೃಷ್ಟಿಸಿದ್ದಾರೆ. ಕಥೆಯ ಲೈನ್​ ತುಂಬ ಚೆನ್ನಾಗಿದೆ. ಹೀಗೇ ಮಾತನಾಡುತ್ತಾ ಎಲ್ಲಿ ಲೈನ್​ ಬಿಟ್ಟುಕೊಡುತ್ತೇನೋ ಅಂತ ನನಗೇ ಒಮ್ಮೊಮ್ಮೆ ಭಯವಾಗುತ್ತದೆ. ಟ್ರೇಲರ್​ ನೋಡಿಯೇ ತುಂಬ ಜನ ಕಥೆ ಗೆಸ್​ ಮಾಡಿದ್ದಾರೆ. ಜನ ಈ ರೀತಿ ಕಥೆಯ ಜತೆ ಇನ್ವಾಲ್ವ್​ ಆಗಿರುವುದು ಖುಷಿ ನೀಡಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶಿವಣ್ಣ.

ಗ್ಯಾರಂಟಿ ಕೊಡುತ್ತೇನೆ, ನಿರಾಸೆ ಮಾಡಲ್ಲ

""45' ನಿರಾಸೆಯಂತೂ ಮಾಡುವುದಿಲ್ಲ ಎಂಬ ಗ್ಯಾರಂಟಿ ಕೊಡುತ್ತೇನೆ' ಎನ್ನುವ ಶಿವಣ್ಣ, "ಪ್ರೇಕ್ಷಕರು ತುಂಬ ಎಂಜಾಯ್​ ಮಾಡುತ್ತಾರೆ, ಕೊನೆಗೆ ಒಂದೊಳ್ಳೆ ಸಂದೇಶವನ್ನೂ ಕೊಂಡೊಯ್ಯುತ್ತಾರೆ. ಚಿತ್ರದಲ್ಲಿ ಒಂದು ಸುಂದರ ಸೀಕ್ರೆಟ್​ ಇದೆ. ಜನರಿಗೆ ಇಷ್ಟವಾಗುವ ಭರವಸೆ ಇದೆ. ನಾನು ಚಿತ್ರರಂಗಕ್ಕೆ ನಾಯಕನಾಗಿ ಬಂದು 41 ವರ್ಷಗಳಾಗಿವೆ. ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಅಪ್ಪಾಜಿ ಅವರ ಸಮಯದಿಂದಲೂ ಸಿನಿಮಾ ನೋಡಿದ್ದೇನೆ. ಈ ಚಿತ್ರದಲ್ಲಿ ಒಂದು ಶಕ್ತಿ ಇದೆ ಅದು ಜನರಿಗೆ ಇಷ್ಟವಾಗುತ್ತದೆ. ಚಿತ್ರದಲ್ಲಿ ಹೊಸ ಪ್ರಪಂಚವನ್ನೇ ನೋಡಬಹುದು. ನಾನು ರಿಲೀಸ್​ಗೂ ಮುನ್ನ ಸಿನಿಮಾ ನೋಡುವುದಿಲ್ಲ. "ಜೋಗಿ', "ಟಗರು', "ವಜ್ರಕಾಯ', "ಭಜರಂಗಿ'.. ಹೀಗೆ ಯಾವ ಚಿತ್ರವನ್ನೂ ನೋಡಿರಲಿಲ್ಲ. ಆದರೆ, "45' ಡಬ್ಬಿಂಗ್​ ಮಾಡುವಾಗ ತುಂಬ ಕುತೂಹಲ ಉಂಟಾಗುತ್ತಿತ್ತು. ಸಾಮಾನ್ಯವಾಗಿ ನಾನು ಒಂದೇ ದಿನದಲ್ಲಿ ಡಬ್ಬಿಂಗ್​ ಮುಗಿಸುತ್ತೇನೆ. ಆದರೆ, "45'ಗೆ ಮೂರು ದಿನ ತೆಗೆದುಕೊಂಡೆ. ಡಬ್ಬಿಂಗ್​ ಮುಗಿಸಿ ಚಿಕಿತ್ಸೆಗೆ ಅಮೆರಿಕಗೆ ತೆರಳಬೇಕಿತ್ತು. ಅದರ ನಡುವೆಯೂ ನಿಧಾನವಾಗಿ ಡಬ್ಬಿಂಗ್​ ಮಾಡುತ್ತಾ ಈ ಉಪೇಂದ್ರ, ರಾಜ್​ ಬಿ.ಶೆಟ್ಟಿ ಅವರಿರುವ ಸನ್ನಿವೇಶಗಳನ್ನು ನೋಡುತ್ತಾ ಎಂಜಾಯ್​ ಮಾಡುತ್ತಿದ್ದೆ' ಎಂದು ಹೇಳಿಕೊಳ್ಳುತ್ತಾರೆ.

ಚೆಲುವೆಯಾದ ಶಿವಣ್ಣ!

ಇನ್ನು ಟ್ರೇಲರ್​ ಕೊನೆಯಲ್ಲಿ ಭರತನಾಟ್ಯ ನೃತ್ಯಗಾರ್ತಿ ಲುಕ್​ನಲ್ಲಿ ಕಾಣಿಸಿಕೊಂಡಿರುವ ಶಿವಣ್ಣ, "ನನ್ನ ಪ್ರಕಾರ ಪಾತ್ರದ ವಿಷಯ ಬಂದಾಗ ಇಮೇಜ್​ ನೋಡಬಾರದು. ನಾವಿರೋದೇ ಭೂಮಿ ತಾಯಿ ಮೇಲೆ, ಹೆತ್ತವಳು ತಾಯಿ, ಹೆಂಡತಿ, ತಂಗಿ, ಅಕ್ಕ, ಮಗಳು... ಸ್ತ್ರೀಶಕ್ತಿಯ ನಡುವೆಯೇ ಬದುಕುತ್ತಿದ್ದೇವೆ. ಅಂತಹ ಶಕ್ತಿಯ ವೇಷ ಹಾಕುವುದೇ ಅದೃಷ್ಟ' ಎನ್ನುತ್ತಾರೆ.

ಕಿಚ್ಚನ "ಮಾರ್ಕ್​' ಜತೆ ಬಾಕ್ಸಾಫಿಸ್​ ಕ್ಲ್ಯಾಶ್​

ಕಿಚ್ಚ ಸುದೀಪ್​ ನಟಿಸಿರುವ "ಮಾರ್ಕ್​' ಮತ್ತು "45' ಎರಡು ಚಿತ್ರಗಳೂ ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫಿಸ್​ ಕ್ಲ್ಯಾಶ್​ ಬಗ್ಗೆ ಶಿವರಾಜಕುಮಾರ್​, "ಕ್ರಿಸ್ಮಸ್​ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸಾಲು ರಜೆಗಳಿರುವ ಕಾರಣ, ಎಷ್ಟೇ ಚಿತ್ರಗಳು ರಿಲೀಸ್​ ಆದರೂ, ಸಮಸ್ಯೆಯಿಲ್ಲ. "ಘೋಸ್ಟ್​' ರಿಲೀಸ್​ ಸಮಯದಲ್ಲೂ ನಾಲ್ಕೈದು ಚಿತ್ರಗಳು ಬಿಡುಗಡೆಯಾಗಿದ್ದವು. ಇದೀಗ "45' ಜತೆ ಸುದೀಪ್​ ಅವರ "ಮಾರ್ಕ್​' ಬರುತ್ತಿದೆ. ಸಾಲು ರಜೆಗಳು ಸಿಗುವುದೇ ಅಪರೂಪ. ಹೀಗಾಗಿ ಅವರು ಬರುವುದು ಬೇಡ ಎಂದು ಹೇಳಲು ಸಾಧ್ಯವೇ? ಖಂಡಿತ ಇಲ್ಲ. ನಮ್ಮ, ಅವರ ಎರಡು ಚಿತ್ರಗಳಿಗೂ ಈ ರಜೆಗಳಿಂದ ಒಳ್ಳೆಯದಾಗುತ್ತದೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

ವಿನೀಶ್​ ದರ್ಶನ್​ ಭೇಟಿ

ಕೆಲ ದಿನಗಳ ಹಿಂದಷ್ಟೇ ಕೆಂಗೇರಿ ಸಮೀಪ "ಡ್ಯಾಡ್​' ಚಿತ್ರದ ಶೂಟಿಂಗ್​ ಸಮಯದಲ್ಲಿ ನಟ ದರ್ಶನ್​ ಪುತ್ರ ವಿನೀಶ್​, ಶಿವರಾಜ್​ಕುಮಾರ್​ರನ್ನು ಭೇಟಿಯಾಗಿದ್ದರು. ಭೇಟಿಯ ವಿಡಿಯೋ ವೈರಲ್​ ಆಗಿತ್ತು. ಆ ಭೇಟಿಯ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ ಶಿವಣ್ಣ, "ನಾನು ಶೂಟಿಂಗ್​ ಮಾಡುತ್ತಿದ್ದೆ. ವಿನೀಶ್​ ಅಲ್ಲೆ ನಿಂತಿದ್ದ. ಸಡನ್ನಾಗಿ ನೋಡಿದೆ ನನಗೆ ಬೇಸರವಾಯಿತು. ಮನಸ್ಸಿಗೆ ತುಂಬ ನೋವಾಯಿತು. ನನ್ನ ಬಳಿ ಬಂದು ಹೇಗಿದ್ದೀರ ಅಣ್ಣ ಅಂತ ವಿಚಾರಿಸಿದ. ನನಗೆ ಆತ ನನ್ನ ಬಗ್ಗೆ ಕೇರ್​ ಮಾಡಿದ್ದು ಮನಸ್ಸಿಗೆ ನಾಟಿತು. ನೀನು ಹೇಗಿದ್ದೀಯಾ ವಿನೀಶ್​? ಚೆನ್ನಾಗಿ ಓದು, ಚೆನ್ನಾಗಿರು. ಅಮ್ಮ ಹೇಗಿದ್ದಾರೆ? ತಲೆ ಕೆಡಿಸಿಕೊಳ್ಳಬೇಡ, ಎಲ್ಲವೂ ಸರಿಹೋಗುತ್ತದೆ. ದೇವರ ಮೇಲೆ ಭಾರ ಹಾಕಿ ಆರಾಮಾಗಿರಿ ಅಂತ ಅವನಿಗೆ ಧೈರ್ಯ ಹೇಳಿದೆ. ದರ್ಶನ್​ಗೆ ಹೀಗೇಕಾಯಿತು ಅಂತ ಯಾರಿಗೂ ಗೊತ್ತಿಲ್ಲ. ಹೀಗಾಗಲಿ ಅಂತ ಯಾರೂ ಬಯಸುವುದಿಲ್ಲ. ದರ್ಶನ್​ ಅವರ ತಂದೆಯ ಸಮಯದಿಂದಲೂ ನಾವು ಎಲ್ಲರೂ ಒಂದು ಕುಟುಂಬದಂತೆ ಇದ್ದವರು. ಅವರ ಬಗ್ಗೆ ಕಾಳಜಿ ಅಂತೂ ಇದ್ದೇ ಇದೆ' ಎನ್ನುತ್ತಾರೆ.