ನ್ಯೂಸ್

ಕೋಮಾಗೆ ಜಾರಿರುವ 'ಗಣಪ' ಖ್ಯಾತಿಯ ನಟ ಸಂತೋಷ್ ಬಾಲರಾಜ್!​ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ 'ಗಣಪ' ಮತ್ತು 'ಕರಿಯ 2' ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾದ ನಟ ಸಂತೋಷ್​ ಬಾಲರಾಜ್​ ಇದೀಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ನಿರ್ಮಾಪಕ ಆನೇಕಲ್​ ಬಾಲರಾಜ್​ ಅವರ ಪುತ್ರ ಸಂತೋಷ್​ ಬಾಲರಾಜ್​ಗೆ ಮೊದಲು ಜಾಂಡೀಸ್​ ಕಾಯಿಲೆ ಕಾಡಿತ್ತು. ಇದರಿಂದ ಅವರ ಆರೋಗ್ಯ ತೀರ ಹದಗೆಟ್ಟಿತು. ಒಂದಷ್ಟು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್​, ಇದೀಗ ಜಾಂಡೀಸ್​ನಿಂದ ಕೋಮಾಗೆ ಜಾರಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.

ಜಾಂಡೀಸ್​ ವಿಪರೀತವಾದ ಕಾರಣ ಸಂತೋಷ್​ ಅವರ ಆರೋಗ್ಯ ಪರಿಸ್ಥಿತಿ ತೀರ ಗಂಭೀರವಾಗಿದೆ. ಪ್ರಸ್ತುತ, ತಮ್ಮ ತಾಯಿಯೊಂದಿಗೆ ಇರುವ ನಟನಿಗೆ ಇನ್ನೂ ಮದುವೆಯಾಗಿಲ್ಲ ಎಂದು ವರದಿಯಾಗಿದೆ. ಸಂತೋಷ್​ ಬಾಲರಾಜ್​ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ಗಣಪ', 'ಕರಿಯ 2', 'ಬರ್ಕ್ಲಿ', 'ಸತ್ಯ' ಸೇರಿದಂತೆ ಒಂದಷ್ಟು ಕನ್ನಡ ಚಿತ್ರಗಳಲ್ಲಿ ನಟನಾಗಿ ಅಭಿನಯಿಸಿದ್ದಾರೆ.