ಬೆಂಗಳೂರು: ನಟರೊಬ್ಬರಿಗೆ ದುಬೈಗೆ ಕಾರ್ಯಕ್ರಮಕ್ಕೆ ಕಳುಹಿಸುವುದಾಗಿ ಹಾಗೂ ಕಡಿಮೆ ದರಕ್ಕೆ ನಿವೇಶನ ಕೊಡಿಸುವುದಾಗಿ ನಂಬಿಸಿ ವಿವಿಧ ಹಂತಗಳಲ್ಲಿ ೪.೩೨ ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿರಿಯ ಕಲಾವಿದ ರವಿಕಿರಣ್(೬೫) ಅವರು ನೀಡಿದ ದೂರಿನ ಮೇರೆಗೆ ನವೀನ್ ಭಾಗ್ಯಶ್ರೀ ಗುರೂಜಿ ಮತ್ತು ಇವರ ಪತ್ನಿ ಚೈತ್ರಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಟ ರವಿಕಿರಣ್ ಅವರಿಗೆ ಎರಡು ವರ್ಷದ ಹಿಂದೆ ಪರಿಚಿತರ ಮುಖಾಂತರ ನವೀನ್ ಗುರೂಜಿ ಎಂಬುವವರ ಪರಿಚಯವಾಗಿದೆ. ಕಳೆದ ಅಕ್ಟೋಬರ್‌ನಿಂದ ನವೀನ್ ಗುರೂಜಿ ತಾನು ಒಂದು ಅನಾಥಾಶ್ರಮ ನಡೆಸುತ್ತಿದ್ದು, ಅದಕ್ಕೆ ಏನಾದರೂ ದಿನಸಿ ಕೊಡಿಸಿ ಎಂದು ರವಿ ಕಿರಣ್ ಅವರನ್ನು ಕೇಳಿದ್ದಾರೆ. ಅದರಂತೆ ರವಿ ಕಿರಣ್ ಗೂಗಲ್ ಪೇ ಮುಖಾಂತರ ೨,೫೦೦ ರೂ. ಕಳುಹಿಸಿದ್ದಾರೆ. ಬಳಿಕ ಗುರೂಜಿ, ನವೆಂಬರ್‌ನಲ್ಲಿ ದುಬೈನಲ್ಲಿ ಒಂದು ಕಾರ್ಯಕ್ರಮವಿದೆ. ನೀವು ಅಲ್ಲಿಗೆ ಮುಖ್ಯ ಅಥಿಯಾಗಿ ಹೋದರೆ ದುಡ್ಡು ಕೊಡುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ರವಿ ಕಿರಣ್ ಒಪ್ಪಿದಾಗ ದುಬೈಗೆ ತೆರಳಲು ಟಿಕೆಟ್ ಮಾಡಿಸಿ ಕೊಡುವುದಾಗಿ ವಿವಿಧ ಹಂತಗಳಲ್ಲಿ ಗುರೂಜಿ ಹಣ ಹಾಕಿಸಿಕೊಂಡಿದ್ದಾರೆ.
ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಧೋಖಾ:
ಕೆಲ ದಿನಗಳ ಬಳಿಕ ದುಬೈನಲ್ಲಿ ಪರಿಚಿತರ ಮೂಲಕ ನಿಮಗೆ ಕಡಿಮೆ ಬೆಲೆಗೆ ಚಿನ್ನ ಕೊಡಿಸುತ್ತೇನೆ ಎಂದು ರವಿ ಕಿರಣ್ ಅವರಿಂದ ಮತ್ತಷ್ಟು ಹಣ ಪಡೆದಿದ್ದಾರೆ. ನಂತರ ಟ್ರಸ್ಟ್‌ನಿಂದ ಹೊಸಕೋಟೆಯಲ್ಲಿ ನಿಮಗೆ ನಿವೇಶ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದಿದ್ದಾರೆ. ಹೀಗೆ ನಾನಾ ಕಾರಣ ನೀಡಿ ರವಿ ಕಿರಣ್ ಅವರಿಂದ ಒಟ್ಟು ೪.೩೨ ಲಕ್ಷ ರೂ. ಹಣ ಪಡೆದಿದ್ದಾರೆ. ಆದರೆ, ಈ ಬಗ್ಗೆ ವಿಚಾರಿಸಲು ಕರೆ ಮಾಡಿದರೆ ಗುರೂಜಿ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ನಾನು ಹಣ ವರ್ಗಾಣೆ ಮಾಡಿದ ಖಾತೆ ಮಾಹಿತಿ ಪರಿಶೀಲಿಸಿದಾಗ ಅದು ಗುರೂಜಿ ಪತ್ನಿ ಚೈತ್ರಾ ಅವರ ಹೆಸರಿನಲ್ಲಿರುವುದು ಕಂಡು ಬಂದಿದೆ. ನನಗೆ ಮೋಸ ಮಾಡುವ ಉದ್ದೇಶದಿಂದಲೇ ಗುರೂಜಿ ದಂಪತಿ ದುಬೈ ಪ್ರವಾಸ, ಕಡಿಮೆ ಬೆಲೆಗೆ ಚಿನ್ನ, ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿರುವ ರವಿ ಕಿರಣ್, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.