ಬೆಂಗಳೂರು: ಕಿರುತೆರೆಯಿಂದ ಹಲವು ಕಲಾವಿದರು ನಟರಾಗಿ, ನಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ‘ಅಗ್ನಿಸಾಕ್ಷಿ’, ‘ಅಣ್ಣ ತಂಗಿ’ ಧಾರಾವಾಹಿಗಳಲ್ಲಿ ನಟಿಸಿರುವ ರಾಜೇಶ್ ಧ್ರುವ, ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಹೆಸರು ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’. ನಿರ್ದೇಶನದ ಜತೆಗೆ ಫೋಟೋಗ್ರಾಫರ್ ಪುಟ್ಟು ಪಾತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಜೂನ್ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಡಿಸೆಂಬರ್ನಲ್ಲಿ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಶಿರಸಿ, ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಉತ್ತರ ಕನ್ನಡ ಭಾಷೆಯ ಸೊಗಡಿನ ಜತೆಗೆ ಅಲ್ಲಿನ ರಮಣೀಯ ತಾಣಗಳನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ.
ಒಬ್ಬ ಫೋಟೋಗ್ರಾಫರ್ ಮತ್ತು ಆತನ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ, ಜತೆಗೊಂದು ಲವ್ಸ್ಟೋರಿ ಚಿತ್ರದ ಹೈಲೈಟ್. ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ರವಿ ಸಾಲಿಯಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ರಾಧಿಕಾ ಅಚ್ಯುತ್ ರಾವ್, ಸಂಪತ್ ರಾಮ್ ಕಾಮಿಡಿ ಕಿಲಾಡಿ ಕಲಾವಿದೆ ಶುಭಲಕ್ಷ್ಮೀ, ನಕುಲ್ ಶರ್ವ, ರಕ್ಷಿತ್, ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಶಿಶಿರ್ ನಟಿಸಿದ್ದಾರೆ. ಕಥೆ, ಚಿತ್ರಕಥೆ ಅಭಿಷೇಕ್ ಶಿರಸಿ ಮತ್ತು ಪೃಥ್ವಿಕಾಂತ್ ಬರೆದಿದ್ದು, ಅಜಿತ್ ಬೊಪ್ಪನಳ್ಳಿ ಸಂಭಾಷಣೆ, ಮನೋಜ್ ಛಾಯಾಗ್ರಹಣ, ಗಣಪತಿ ಭಟ್ ಸಂಕಲನವಿದೆ. ಚಿತ್ರದಲ್ಲಿ ಪ್ರಮೋದ್ ಮರವಂತೆ ಬರೆದಿರುವ ಎರಡು ಹಾಡುಗಳಿದ್ದು ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತವಿದ್ದು, ವೆಂಕಟೇಶ್ವರ್ ರಾವ್ ನಿರ್ವಿುಸಿದ್ದಾರೆ.