ಶಿವಮೊಗ್ಗ: ಒಂದು ಪಕ್ಷ, ಒಬ್ಬ ವ್ಯಕ್ತಿಯನ್ನು ಪ್ರಶ್ನಿಸಿದರೆ ನನಗೆ ಎಡಪಂಥೀಯ, ಹಿಂದುಗಳ ವಿರೋಧಿ, ಅರ್ಬನ್ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಬಹುಭಾಷಾ ಚಿತ್ರನಟ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು.
ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ನನ್ನ ಪ್ರಶ್ನೆಗಳು ನಿರಂತರವಾಗಿರುತ್ತವೆ. ನನ್ನ ವಿರುದ್ಧ ನಿರಾಧಾರವಾಗಿ ಟೀಕೆ ಮಾಡುವವರು, ಕಟುವಾಗಿ ವಿರೋಧಿಸುವವರ ಬಗ್ಗೆ ನನಗೆ ಆಕ್ರೋಶವಿಲ್ಲ, ಅನುಕಂಪವಿದೆ. ದೇಶದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನನ್ನ ಪ್ರಶ್ನೆಗಳು ಸದಾ ಜಾರಿಯಲ್ಲಿರುತ್ತವೆ ಎಂದರು.
ವಿವೇಕ ಸಂಘಟನೆಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಮಗೆ ಬೇಕಿರುವುದು ಜಗಳ, ಅಹಂಕಾರ, ಕ್ರೌರ್ಯವಲ್ಲ. ಮಾತುಕತೆ, ಸಂವಾದ. ಬಾಂಧವ್ಯ ಮುಖ್ಯ. ಎಲ್ಲರಿಗೂ ಸಮಾನತೆಯಿದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಹಿಂಸೆಗೆ ಧರ್ಮವಿಲ್ಲ: ಯಾವ ಧರ್ಮವೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಹಿಂಸೆಗೆ ಧರ್ಮದ ತಳಹದಿ, ಒತ್ತಾಸೆಯೂ ಅಲ್ಲ. ಹಿಂಸೆ ಎಂಬುದು ಧರ್ಮಾತೀತ. ಧರ್ಮದ ಲೇಪನದಲ್ಲಿ ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಾನವೀಯತೆಗಾಗಿ ತುಡಿಯುವ ಮನಸ್ಸು ನಮ್ಮದಾಗಬೇಕೆಂದು ಪ್ರಕಾಶ್ ರಾಜ್ ಹೇಳಿದರು.
ನಾನು ನಿರ್ದಿಗಂತ ನಾಟಕ ತಂಡದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದೇನೆ. ರಾಜ್ಯದಲ್ಲಿ ಇದನ್ನು ಕಟ್ಟಿ ಬೆಳೆಸಲು ಅನೇಕ ಸವಾಲುಗಳಿವೆ. ಆದರೆ ಇದಕ್ಕೆಂದು ನಾನು ಸರ್ಕಾರದ ಸಹಾಯ ಕೇಳುವುದಿಲ್ಲ. ಸರ್ಕಾರದ ನೆರವು ಪಡೆದರೆ ಮುಂದೆ ಸರ್ಕಾರವನ್ನು ಪ್ರಶ್ನಿಸುವ ನನ್ನ ಅಧಿಕಾರವೇ ಮೊಟಕುಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.
ನಾನು ಧರ್ಮವಿರೋಧಿಯಲ್ಲ: ನಾನೆಂದೂ ಯಾವುದೇ ಧರ್ಮವನ್ನು ವಿರೋಧಿಸಿಲ್ಲ. ಕೆಲವರು ನನ್ನನ್ನು ಹಿಂದು ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ನನ್ನ ಪತ್ನಿ ದೇವಾಲಯಕ್ಕೆ ಹೋದರೆ, ಹೋಮ-ಹವನದಲ್ಲಿ ಪಾಲ್ಗೊಂಡರೆ ಅದನ್ನು ಕೆಟ್ಟದಾಗಿ ಪ್ರಚಾರ ಮಾಡುತ್ತಾರೆ. ವೈಯಕ್ತಿಕವಾಗಿ ನಾನು ದೇವರನ್ನು ನಂಬುವುದಿಲ್ಲ. ಹಾಗೆಂದ ಮಾತ್ರಕ್ಕೆ ನನ್ನ ಪತ್ನಿಯ ನಿರ್ಧಾರ, ಸ್ವಾತಂತ್ರೃವನ್ನು ನಾನು ಗೌರವಿಸುವುದಿಲ್ಲ ಎಂದರ್ಥವಲ್ಲ ಎಂದು ಪ್ರಕಾಶ್ ರಾಜ್ ತಿಳಿಸಿದರು.
ವಿವೇಕ ಸಂಘಟನೆ ಅಧ್ಯಕ್ಷ ಆರ್.ಕುಮಾರ್, ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಡಿಎಸ್‌ಎಸ್(ಅಂಬೇಡ್ಕರ್ ವಾದ) ಸಂಚಾಲಕ ಟಿ.ಹಾಲೇಶಪ್ಪ, ಪ್ರಮುಖರಾದ ಅನನ್ಯಾ ಶಿವು ಉಪಸ್ಥಿತರಿದ್ದರು.