ಧೂತ 2 ಚಿತ್ರಕ್ಕೆ ಮುಹೂರ್ತ 
ನ್ಯೂಸ್

ಧೂತ ರಿಟರ್ನ್ಸ್: ಎರಡನೇ ಅಧ್ಯಾಯದ ಮೂಲಕ ನಿರ್ಮಾಪಕನಾದ ನಾಗಚೈತನ್ಯ

ಪ್ರಮುಖ ಮುಖ್ಯಾಂಶಗಳು

  • ನಟನೆ ಜತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತ ಆ್ಯಕ್ಟರ್​
  • ಧೂತ ಸರಣಿಯ ಸೀಕ್ವೆಲ್ ಗೆ ಮುಹೂರ್ತ
  • ಹೊಸ ವೇದಿಕೆಯಲ್ಲಿ ಹೊಸ ಜವಾಬ್ದಾರಿ ಹೊತ್ತ ಟಾಲಿವುಡ್ ನಟ
ಟಾಲಿವುಡ್ ನಟ ನಾಗಚೈತನ್ಯ ಸಿನಿಮಾ ಜತೆ ಜತೆಗೆ ವೆಬ್‌ಸರಣಿಯಲ್ಲೂ ಮಿಂಚಿದ್ದಾರೆ. 2023ರಲ್ಲಿ ರಿಲೀಸ್ ಆದ ‘ಧೂತ’ ಸರಣಿ ಮೂಲಕ ಅವರು ಒಟಿಟಿಗೆ ಪದಾರ್ಪಣೆ ಮಾಡಿದ್ದರು. ‘ಮನಂ’ ಖ್ಯಾತಿಯ ವಿಕ್ರಮ್ ಕೆ. ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದ ಈ ಹಾರರ್ ಮಿಸ್ಟ್ರಿ ಥ್ರಿಲ್ಲರ್ ಸರಣಿಯು 8 ಸಂಚಿಕೆಗಳಲ್ಲಿ ಬಿಡುಗಡೆಯಾಗಿತ್ತು. ಸಿರೀಸ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮೂರು ವರ್ಷಗಳ ಬಳಿಕ ತಂಡದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ‘ಧೂತ’ ಸೀಕ್ವೆಲ್ ಬರಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ‘ಧೂತ 2’ ಮುಹೂರ್ತ ನೆರವೇರಿಸಲಾಗಿದೆ. ಹಿರಿಯ ನಟ ನಾಗಾರ್ಜುನ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಇನ್ನು ನಾಗಚೈತನ್ಯ ನಟನೆಯ ಜತೆಗೆ ಮತ್ತೊಂದು ಜವಾಬ್ದಾರಿ ಹೊರಲು ಸಿದ್ಧರಾಗಿದ್ದು, ‘ಧೂತ 2’ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಟ, ‘‘ಧೂತ’ ಎರಡನೇ ಅಧ್ಯಾಯದ ಮೂಲಕ ನಾನು ಮೊದಲ ಬಾರಿಗೆ ನಿರ್ಮಾಪಕನಾಗಿ ಹೆಜ್ಜೆ ಇಡುತ್ತಿದ್ದೇನೆ. ಮುಂದಿನ ಮ್ಯಾಜಿಕ್‌ಗಾಗಿ ಕಾದು ನೋಡೋಣ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ಧೂತ 2’ಗೂ ವಿಕ್ರಮ್ ಆ್ಯಕ್ಷನ್-ಕಟ್ ಹೇಳಲಿದ್ದು, ಮೊದಲ ಭಾಗದಲ್ಲಿದ್ದ ಕಲಾ ಬಳಗವೇ ಸೀಕ್ವೆಲ್‌ನಲ್ಲೂ ಮುಂದುವರಿಯಲಿದೆ. ಮುಹೂರ್ತದಲ್ಲಿ ನಟಿಯರಾದ ಪಾರ್ವತಿ ತಿರುವೊತ್ತು, ಪ್ರಿಯಾ ಭವಾನಿ ಶಂಕರ್ ಭಾಗವಹಿಸಿದ್ದು, ಅವರು ಎರಡನೇ ಭಾಗದಲ್ಲಿರುವುದು ಖಚಿತವಾಗಿದೆ. ಸದ್ಯದಲ್ಲೇ ‘ಧೂತ 2’ ಶೂಟಿಂಗ್ ಆರಂಭವಾಗಲಿದೆ. -ಏಜೆನ್ಸೀಸ್