ನ್ಯೂಸ್

ವರದಿಗಾರನ ಮೇಲೆ ನಟ ಮೋಹನ್​ ಬಾಬು ಹಲ್ಲೆ; ತಂದೆ ಪರವಾಗಿ ಕ್ಷಮೆಯಾಚಿಸಿ ಕಣ್ಣೀರು ಹಾಕಿದ ನಟ ಮಂಚು Manoj

ಹೈದರಾಬಾದ್​: ಟಾಲಿವುಡ್​ನ ಖ್ಯಾತ ನಟ ಮೋಹನ್​ ಬಾಬು (Mohan Babu) ಹಾಗೂ ಪುತ್ರ ಮಂಚು ಮನೋಜ್​ (Manchu Manoj) ನಡುವಿನ ಗಲಾಟೆ ತಾರಕಕ್ಕೇರಿದ್ದು, ಜಗಜ್ಜಾಹೀರಾಗಿದೆ. ಆಸ್ತಿ ವಿವಾದ ಸಂಬಂಧ ತಂದೆ-ಮಗ ಇಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಇದೀಗ ಜಲಪಲ್ಲಿಯಲ್ಲಿರುವ ನಿವಾಸದ ಮುಂದೆ​ ದೊಡ್ಡ ಹೈಡ್ರಾಮಾವೇ ನಡೆದಿದೆ. ಈ ವೇಳೆ ನಟ ಮೋಹನ್​ ಬಾಬು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಟ ಮನೋಜ್​ ಮನೆ ಪ್ರವೇಶಿಸದಂತೆ ಮೋಹನ್​ ಬಾಬು ನಿಷೇಧ ಹೇರಿದ್ದು, ಬೌನ್ಸರ್​​ಗಳನ್ನು ನೇಮಿಸಿದ್ದಾರೆ. ಇದೆಲ್ಲದರ ಹೊರತಾಗಿಯೂ ನಟ ಮನೋಜ್​ ಮನೆ ಪ್ರವೇಶಿಸಲು ಮುಂದಾಗಿದ್ದು, ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ. ಈ ವೇಳೆ ಮನೆಯಿಂದ ಹೊರಬಂದ ನಟ ಮೋಹನ್​ ಬಾಬು ಅವರು ಪ್ರಶ್ನೆ ಕೇಳಲು ಮುಂದಾದ ವರದಿಗಾರನ ಮೇಲೆ ಹಲ್ಲೆ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆ ಸಂಬಂಧ ಮೋಹನ್​ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಬಳಿಕ ಮೋಹನ್ ​ಬಾಬು ಅವರ ಬಳಿಯಿದ್ದ ಪರವಾನಗಿಯುಳ್ಳ ಗನ್​ ಸೀಜ್ ಮಾಡಲಾಗಿದೆ. ಮೋಹನ್ ಬಾಬು, ಪುತ್ರ ವಿಷ್ಣು ಅವರಿಗೆ ಸೇರಿದ ಗನ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೂ ಈ ಬಗ್ಗೆ ನಟ ಮಂಚು ಮನೋಜ್​ ಪ್ರತಿಕ್ರಿಯಿಸಿದ್ದು, ತಂದೆ ಮಾಡಿದ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಮನೋಜ್​, ನನ್ನ ತಂದೆ ನನಗೆ ದೇವರಿದ್ದಂತೆ, ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಕ್ಕೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಕುಟುಂಬದಿಂದ ಯಾವುದೇ ಹಣ ಅಥವಾ ಆಸ್ತಿ ಕೇಳಿಲ್ಲ. ನಾನು ನನ್ನ ಆತ್ಮಗೌರವಕ್ಕಾಗಿ ಈ ಹೋರಾಟ ಮಾಡುತ್ತಿದ್ದೇನೆ. ನಾನು ಹಾಗೂ ನನ್ನ ಪತ್ನಿ ಕುಟುಂಬದಿಂದ ದೂರವೇ ಇದ್ದೆವು. ನನ್ನ ಸಹೋದರ ಮಂಚು ವಿಷ್ಣು ದುಬೈಗೆ ಶಿಫ್ಟ್ ಆದ. ಆಗ ನಮ್ಮ ಕುಟುಂಬದ ಆಪ್ತರು ಕೆಲವರು ಒತ್ತಾಯ ಮಾಡಿದ ಕಾರಣ ಕುಟುಂಬಕ್ಕೆ ಬೆಂಬಲವಾಗಿರಲೆಂದು ನಾನು ಮನೆಗೆ ಮರಳಿದೆ.

ಈಗ ನನ್ನನ್ನು ಹೊರಗೆ ಹಾಕುವ ಪ್ರಯತ್ನ ನಡೆದಿದೆ. ಬೇರೆಯವರ ಮಾತು ಕೇಳಿಕೊಂಡು ನನ್ನ ತಂದೆಯೇ ನನ್ನನ್ನು ದೂರ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ನಿಂದಿಸಿ ಮಾತನಾಡಿದ್ದಾರೆ. ನಾನು ಆತ್ಮಗೌರವಕ್ಕಾಗಿ ಈ ಹೋರಾಟವನ್ನು ಮಾಡುತ್ತಿದ್ಧೇನೆ ಎಂದು ನಟ ಮಂಚು ಮನೋಜ್​ ಹೇಳಿದ್ದಾರೆ.