ಪಿನಾಕ ಪೋಸ್ಟರ್​ 
ನ್ಯೂಸ್

ಗೋಲ್ಡನ್ ಪಿನಾಕ: ಗಣೇಶ್ ಅಭಿನಯದ ಚಿತ್ರದ ಅದ್ದೂರಿ ಟೀಸರ್ ರಿಲೀಸ್, ಎರಡು ಶೇಡ್‌ನಲ್ಲಿ ನಟ

ಪ್ರಮುಖ ಮುಖ್ಯಾಂಶಗಳು

  • ಒಂದೂವರೆ ನಿಮಿಷದ ಟೀಸರ್ ನಲ್ಲಿ ದೃಶ್ಯ ವೈಭವ
  • ಎರಡು ಶೇಡ್​ ನಲ್ಲಿ ಕಾಣಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್​
  • ಮೊದಲ ಬಾರಿಗೆ ರಾಜನ ಅವತಾರದಲ್ಲಿ ಕೂಲ್ ನಟ
ಬೆಂಗಳೂರು: ರೊಮ್ಯಾಂಟಿಕ್, ಭಗ್ನಪ್ರೇಮಿ, ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿರುವ ನಟ ಗಣೇಶ್ ‘ಪಿನಾಕ’ ಚಿತ್ರದಲ್ಲಿ ಮೊದಲ ಬಾರಿಗೆ ರಾಜನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಕಥೆಗೆ ಪೌರಾಣಿಕ ಸ್ಪರ್ಶ ನೀಡಲಾಗಿದ್ದು, ಇಲ್ಲಿ ಅವರು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೃತ್ಯ ನಿರ್ದೇಶಕ ಬಿ. ಧನಂಜಯ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಅ.2ಕ್ಕೆ ‘ಪಿನಾಕ’ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಚಿತ್ರದ ಟೀಸರ್ ರಿಲೀಸ್ ಮಾಡುವ ಜತೆಗೆ ಚಿತ್ರತಂಡ ಗಣೇಶ್‌ರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಒಂದೂವರೆ ನಿಮಿಷದ ಟೀಸರ್ ಉತ್ಕೃಷ್ಟ ತಂತ್ರಜ್ಞಾನ ಹಾಗೂ ದೃಶ್ಯವೈಭವದಿಂದ ಕೂಡಿದೆ. ಟೀಸರ್‌ನಲ್ಲಿ ಯಾವುದೇ ಸಂಭಾಷಣೆ ಇಲ್ಲವಾದರೂ, ಅದ್ದೂರಿ ಸೆಟ್‌ಗಳು, ಕಲಾಕೃತಿಗಳು, ಪ್ರತಿ ದೃಶ್ಯದಲ್ಲಿ ಸಾವಿರಕ್ಕೂ ಅಧಿಕ ಕಲಾವಿದರ ಮೂಲಕ ಟೀಸರ್ ನೀರಿಕ್ಷೆ ಹೆಚ್ಚಿಸಿದೆ. ಛಾಯಾಗ್ರಹಣವು ಇಡೀ ಝಲಕ್‌ನ ಅದ್ದೂರಿತನ ಹೆಚ್ಚಿಸಿದ್ದು, ಸಾಹಸ ದೃಶ್ಯಗಳು, ಹಿನ್ನೆಲೆ ಸಂಗೀತ ಗಮನಸೆಳೆಯುತ್ತವೆ. ಅಂತಿಮವಾಗಿ ‘ಧರ್ಮಕ್ಕಾಗಿ ಹೋರಾಟ ಆರಂಭ’ ಎಂಬ ಸಾಲು ಕಂಡುಬರುತ್ತದೆ. ನಟ ಗಣೇಶ್ ಜತೆಗೆ ರಂಗಾಯಣ ರಘು, ಸಾಧು ಕೋಕಿಲ ಕಲಾಬಳಗದಲ್ಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ಕನ್ನಡ, ತೆಲುಗು ಸೇರಿ ಪ್ಯಾನ್ ಇಂಡಿಯಾ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಯಾರೂ ಊಹಿಸದ ಕ್ಲೈಮ್ಯಾಕ್ಸ್

ಬರ್ತ್‌ಡೇ ಸಂಭ್ರಮದಲ್ಲಿ ‘ಪಿನಾಕ’ ಚಿತ್ರದ ಟೀಸರ್ ರಿಲೀಸ್ ಆದ ಖುಷಿಯಲ್ಲಿ ನಟ ಗಣೇಶ್, ‘ದೇವರ ಆಶೀರ್ವಾದದಿಂದ ಇಂತಹ ಸಿನಿಮಾ ಮಾಡಲು ಸಾಧ್ಯವಾಯಿತು. ಮಕ್ಕಳು ‘ಕಾರ್ತಿಕೇಯ 2’ ನೋಡಿ ಚೆನ್ನಾಗಿದೆ ಅಂದರು. ಆಗ ನಾನು ಆ ಸಿನಿಮಾ ನೋಡಿ, ಈ ರೀತಿಯ ಪ್ರಯತ್ನ ನಾವು ಕೂಡ ಮಾಡಬಹುದಲ್ವಾ ಅನಿಸಿತು. ಅದರ ಪ್ರಯತ್ನವೇ ‘ಪಿನಾಕ’. ಇದು ದೊಡ್ಡ ಬಜೆಟ್‌ನ ಸಿನಿಮಾ. ಪ್ರತಿ ಶೆಡ್ಯೂಲ್ ಮುಗಿದ ಮುಂದಿನ ಹಂತದ ಚಿತ್ರೀಕರಣ ಆರಂಭವಾಗುತ್ತಿದೆಂದರೆ ಭಯ ಜತೆಗೆ ಹೊಸದೇನೂ ಮಾಡುತ್ತಾರೆ ಎಂಬ ಕುತೂಹಲ ಇರುತ್ತಿತ್ತು. 12 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿ 22 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಈವರೆಗೂ ನಾನು ಯಾವ ಸಿನಿಮಾದಲ್ಲೂ ಆ ರೀತಿಯ ಕ್ಲೈಮ್ಯಾಕ್ಸ್ ನೋಡಿಲ್ಲ. ಪ್ರೇಕ್ಷಕರಿಗೆ ಅಷ್ಟು ದೈವಿಕ ಅನುಭೂತಿ ನೀಡಲಿದೆ. ‘ಚಾರುಕೇಶ ಪಿನಾಕ’ ರಾಜನ ಕಥೆಯನ್ನು ಫ್ಲಾಷ್‌ಬ್ಯಾಕ್ ಜತೆಗೆ ವಿಎಫ್ಎಕ್ಸ್ ಬಳಕೆ ಮಾಡಿಕೊಂಡು ಚೆನ್ನಾಗಿ ತೆರೆ ಮೇಲೆ ತರಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
ಅಕ್ಟೋಬರ್‌ನಲ್ಲಿ ಗಣೇಶ ಹಬ್ಬ
ಈ ಬಾರಿಯ ಅಕ್ಟೋಬರ್ ನಟ ಗಣೇಶ್‌ಗೆ ಹಬ್ಬವಾಗಿರಲಿದೆ. ಈ ತಿಂಗಳ ಹದಿನೈದು ದಿನಗಳ ಅಂತರದಲ್ಲಿ ನಟನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅ. 2ರ ಗಾಂಧಿ ಜಯಂತಿಯಂದು ‘ಪಿನಾಕ’ ತೆರೆಗೆ ಬಂದರೆ, ಅದೇ ತಿಂಗಳ 16ರಂದು ಶ್ರೀನಿವಾಸರಾಜು ನಿರ್ದೇಶನದ ನಟನ ‘ಬೃಂದಾವಿಹಾರಿ’ ತೆರೆಗೆ ಬರಲಿದೆ. ಈ ಮೂಲಕ ನಟನಿಗೆ ಅಕ್ಟೋಬರ್ ಡಬಲ್ ಧಮಾಕಾ.