ದಿಗಂತ್ - ಸಮಂತಾ 
ನ್ಯೂಸ್

Diganth - Samantha ; ಅನಾರೋಗ್ಯದ ನಡುವೆಯೂ ಸಮಂತಾ ಬದ್ಧತೆ ಬಗ್ಗೆ ದಿಗಂತ್​ ಮೆಚ್ಚುಗೆ

Diganth - Samantha
ನಟ ದಿಗಂತ್​ ಇತ್ತೀಚೆಗಷ್ಟೆ "ರುದ್ರ ಕಾಲ' ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಕನ್ನಡದಲ್ಲಿ ಅವಕಾಶಗಳು ಕಡಿಮೆಯಾಗಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. "ಚೆನ್ನಾಗಿ ನಟಿಸುತ್ತೇನೆ ಅಂತ ಗೊತ್ತು. ಆದರೂ ಆಫರ್​ಗಳು ಬರುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದರು. ಹಾಗೇ ಇತ್ತೀಚಿನ ದಿನಗಳಲ್ಲಿ ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಇಂಡಸ್ಟ್ರಿ ಡಲ್​ ಆಗಿದೆ ಎಂದೂ ಹೇಳಿಕೊಂಡಿದ್ದರು. ಹೀಗಾಗಿಯೇ ದಿಗಂತ್​ ಈಗೀಗ ಪರಭಾಷೆಗಳತ್ತ ಗಮನ ಹರಿಸಿದ್ದಾರೆ. 18 ವರ್ಷಗಳ ಬಳಿಕ "ಮಾ ಇಂಟಿ ಬಂಗಾರಂ' ಮೂಲಕ ಟಾಲಿವುಡ್​ಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ಬಿ.ವಿ. ನಂದಿನಿ ರೆಡ್ಡಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಸಮಂತಾ ರುತ್​ ಪ್ರಭು ನಾಯಕಿಯಾಗಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ಸಮಂತಾ ಮತ್ತು ದಿಗಂತ್​, ಸತಿ-ಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ""ಮಾ ಇಂಟಿ ಬಂಗಾರಂ' ನಿರ್ದೇಶಕಿ ನಂದಿನಿ ರೆಡ್ಡಿ ಮತ್ತು "ಲೂಸಿಯಾ' ನಿರ್ದೇಶಕ ಪವನ್​ ಕುಮಾರ್​ ಇಬ್ಬರೂ ಫ್ರೆಂಡ್ಸ್​​. ಈ ಚಿತ್ರಕ್ಕೆ ನಾಯಕನ ಪಾತ್ರವನ್ನು ಹುಡುಕುತ್ತಿರುವ ಬಗ್ಗೆ ಪವನ್​ ಮೂಲಕ ನನಗೆ ತಿಳಿಯಿತು. ನನಗೂ ಕಥೆ ಓಕೆ ಆದ ಕಾರಣ ಒಪ್ಪಿಕೊಂಡೆ. ಹಾಗೇ ಪ್ಯಾನ್​ ಇಂಡಿಯಾ ಬಹುಭಾಷೆಗಳಲ್ಲಿ ಸಿನಿಮಾ ಮಾಡುವ ತಂಡಗಳು ಸಾಮಾನ್ಯವಾಗಿ ಕಲಾವಿದರನ್ನು ಬೇರೆ ಬೇರೆ ಇಂಡಸ್ಟ್ರಿಗಳಿಂದ ಆಯ್ಕೆ ಮಾಡಿಕೊಳ್ಳುತ್ತಾರೆ' ಎನ್ನುತ್ತಾರೆ.

ಸೂಪರ್​ ಸಮಂತಾ!

ನಟಿ ಸಮಂತಾ ರುತ್​ ಪ್ರಭು ಕೆಲ ವರ್ಷಗಳಿಂದೀಚೆಗೆ ತೀವ್ರ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಮಯೋಸಿಟಿಸ್​ ಎಂಬ ಸ್ನಾಯು ಸಂಬಂಧಿ ಸಮಸ್ಯೆಯಿಂದಾಗಿ ಸುಮಾರು ಒಂದೂವರೆ ವರ್ಷ ಚಿತ್ರರಂಗದಿಂದಲೇ ದೂರ ಉಳಿದಿದ್ದರು. ಹೀಗಾಗಿಯೇ 2023ರಲ್ಲಿ "ಶಾಕುಂತಲಂ' ಮತ್ತು "ಖುಷಿ' ಬಳಿಕ ಈ ಮೂರು ವರ್ಷಗಳಲ್ಲಿ, ಸಮಂತಾ ನಟಿಸಿರುವುದು ಕೇವಲ ಒಂದೇ ಸಿನಿಮಾ "ಶುಭಂ'. ಅದೂ ಅವರೇ ನಿರ್ಮಿಸಿದ್ದ ಚಿತ್ರ. ಕಳೆದ ಒಂದು ವರ್ಷದಿಂದ ಬೇರೆ ತಂಡಗಳಲ್ಲಿ ನಟಿಸದೇ ಸಮಂತಾ ತಮ್ಮದೇ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಿಸಿ, ನಟಿಸುತ್ತಿರುವುದಕ್ಕೆ ಅವರ ಅನಾರೋಗ್ಯವೇ ಕಾರಣ ಎಂಬ ಮಾತುಗಳು ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿತ್ತು. ಅದರ ನಡುವೆಯೇ ಅವರ ಜತೆ ತೆರೆ ಹಂಚಿಕೊಂಡಿರುವ ದಿಗಂತ್​, "ಸಮಂತಾ ತುಂಬ ಹಾರ್ಡ್​ ವರ್ಕಿಂಗ್​. ಅವರಿಗೆ ಮಯೋಸಿಟಿಸ್​ ಎಂಬ ಅಪರೂಪದ ಆರೋಗ್ಯ ಸಮಸ್ಯೆ ಇದೆ. ನಾಳೆ ಏನಾಗುತ್ತದೆ ಎಂಬುದೇ ಗೊತ್ತಿಲ್ಲ. ಅವರಿಗೆ ಅವರ ದೇಹ ಹಠಾತ್ತಾಗಿ ಕೈಕೊಡಬಹುದು. ಅಷ್ಟು ಗಂಭೀರ ಆರೋಗ್ಯ ಸಮಸ್ಯೆ ಇದ್ದರೂ, ಅವರ ಸಂಪೂರ್ಣ ಗಮನ ಕೆಲಸದ ಮೇಲಿರುತ್ತದೆ. ಕೆಲಸ ಮಾಡುತ್ತಿದ್ದರೆ ಮಾತ್ರ ನಾನು ಆರೋಗ್ಯವಾಗಿರಬಹುದು ಅಂತ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ಏನಾದರೂ ಕೆಲಸ ಮಾಡುತ್ತಿರುತ್ತಾರೆ' ಎನ್ನುತ್ತಾರೆ.