ಬೆಂಗಳೂರು: ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಇತ್ತೀಚೆಗಷ್ಟೇ ಆನೆ ವಿಚಾರಕ್ಕೆ ಸುದ್ದಿಯಾಗಿದ್ದರು. ಮೈಸೂರು ಮೃಗಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದರು. ಇದೀಗ ಆ ಕೆಲಸವನ್ನು ಅವರ ಸ್ಯಾಂಡಲ್ವುಡ್ನ ಮತ್ತೋರ್ವ ನಟ ಮುಂದುವರಿಸಿದ್ದಾರೆ.
ಬಜಾರ್ ಸಿನಿಮಾ ಮೂಲಕ ಧೂಳೆಬ್ಬಿಸಿದ್ದ ನಟ ಧನ್ವೀರ್ ಗೌಡ, ಮೈಸೂರು ಮೃಗಾಲಯದಲ್ಲಿನ ಕರಿ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ. ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿರುವ ಅವರು, ಅದರನ ನಿರ್ವಹಣಾ ವೆಚ್ಚವನ್ನು ಮೃಗಾಲಯ ಸಿಬ್ಬಂದಿಗೆ ಈಗಾಗಲೇ ನೀಡಿಬಂದಿದ್ದಾರೆ.
ವಿಶೇಷ ಏನೆಂದರೆ, ಇಂದು ಧನ್ವೀರ್ ಜನ್ಮದಿನ. ಆ ಪ್ರಯುಕ್ತ ಹರಿ ಸಂತೋಷ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಬಂಪರ್ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಇದೀಗ ಈ ದಿನದಂದೇ ಕರಿ ಚಿರತೆ ದತ್ತು ಪಡೆದುಕೊಂಡು ಸುದ್ದಿಯಲ್ಲಿದ್ದಾರೆ.
ಅದೇ ರೀತಿ ಶಿವಣ್ಣ ಅವರ ಅಭಿಮಾನಿಗಳು ಭಾನುವಾರವಷ್ಟೇ ಮೈಸೂರಿಗೆ ತೆರಳಿ ಮೃಗಾಲಯದಲ್ಲಿನ ಪ್ರಾಣಿಗಳನ್ನು ದತ್ತು ಪಡೆದುಕೊಂಡು ಸುದ್ದಿಯಾಗಿದ್ದರು.