ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಸದ್ಯ ರೆಗ್ಯೂಲರ್ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ (Darshan) ಸದ್ಯದಲ್ಲೇ ಡೆವಿಲ್ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದು, ಚಿತ್ರತಂಡ ನಟನ ಭದ್ರತೆಗಾಗಿ ಭಾರೀ ಹಣವನ್ನು ವ್ಯಯಿಸುತ್ತಿದೆ. ಇನ್ನೂ ಡೆವಿಲ್ ಶೂಟಿಂಗ್ ಶುರುವಾಗುವುದಕ್ಕೂ ಮುನ್ನವೇ ನಟ ದರ್ಶನ್ ಅವರು ನಿರ್ಧಾರವೊಂದನ್ನ ತೆಗೆದುಕೊಂಡಿದ್ದು, ಚಿತ್ರತಂಡದಿಂದ ತಮ್ಮ ಅಕ್ಕನ ಮಗನಿಗೆ ಗೇಟ್ ಪಾಸ್ ನೀಡಿದ್ದಾರೆ. ಇದಕ್ಕೆ ಕಾರಣವನ್ನು ಸಹ ತಿಳಿಸಿದ್ದಾರೆ.
ಎಲ್ಲಾ ನನ್ನ ಸೆಲೆಬ್ರಿಟಿಸ್ಗಳಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ನನ್ನ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ನಾವು ಸದಾ ಚಿರಋಣಿ. ಆದರೆ, ಈ ವೀಡಿಯೊದಲ್ಲಿ ನಮ್ಮ ಮೇಲಿರುವ ಅಭಿಮಾನದಿಂದ ಇನ್ನೂ ಏನು ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸಿಗೆ ತುಂಬಾ ನೋವಾಗಿದೆ. ಅದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ.
ಚಂದು ಅಥವಾ ನನ್ನ ಮಗ ವಿನೀಶ್ ಗೆ ನೀವು ಅಭಿಮಾನದಿಂದಲೋ ಅಥವಾ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದರೆ ಅದನ್ನು ನಿಮ್ಮ ಮನಸಿನಿಂದ ತೆಗೆದು ಹಾಕಿ ನೀವು ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈ ರೀತಿ ಮಾಡದಂತೆ ಅಭಿಮಾನಿಗಳಿಗೆ ನಟ ದರ್ಶನ್ (Darshan) ಖಡಕ್ ಸಂದೇಶ ರವಾನಿಸಿದ್ದಾರೆ.
ಇದಲ್ಲದೆ ನಟ ದರ್ಶನ್ ತಮ್ಮ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಈ ಮೂಲಕ ದರ್ಶನ್ ಇನ್ನು ಮುಂದೆ ಸಿನಿಮಾ ಬಗ್ಗೆ ಮಾತ್ರ ಗಮನ ಹರಿಸುವ ಮೂಲಕ ಎಲ್ಲದರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ.