ನ್ಯೂಸ್

ಕಾವೇರಿ ವಿಚಾರ; ನಮಗೇ ನೀರಿಲ್ಲ ಅಂದಮೇಲೆ ಅವರಿಗೆ ಎಲ್ಲಿಂದ ಕೊಡೋದು?: ನಟ ಅವಿನಾಶ್​

ಮೋಹನ್​ ಶೆಟ್ಟಿ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಸೆ.26 ರಂದು ರಾಜ್ಯದಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್​ ಕಾವೇರಿ ವಿವಾದಕ್ಕೆ ಪ್ರತಿಕ್ರಿಯಿಸಿದ್ದು, ನೀರಿನ ವಿಚಾರ ಎರಡು ರಾಜ್ಯಗಳ ಭಾವನೆಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.

"ಇಂದಿಗೂ ಎಂದೆಂದಿಗೂ ಕಾವೇರಿ ನೀರು ನಮಗೇ ಸೇರಿದ್ದು, ನಮ್ಮಲ್ಲಿ ನೀರಿದ್ದಾಗ, ಅವರಿಗೆ ಕೇಳದೆಯೇ ನೀರು ಕೊಟ್ಟಿದ್ದೇವೆ. ಈಗ ನಮಗೆ ಕುಡಿಯಲು ನೀರಿಲ್ಲ ಎಂದಾಗ ತಮಿಳುನಾಡಿಗೆ ಎಲ್ಲಿಂದ ನೀರು ಕೊಡುವುದು" ಎಂದು ಅವಿನಾಶ್ ಹೇಳಿದರು.

"ಎಲ್ಲಾ ಜಲಾಶಯಗಳು ಬರಿದಾಗುತ್ತಿವೆ. ರಾಜ್ಯದಲ್ಲಿ ಬರಗಾಲ ಪ್ರಾರಂಭವಾಗಿದೆ. ನಾವು ಕಲಾವಿದರು, ನಮಗೆ ಯಾವುದೇ ಭಾಷೆಯ ಬ್ಯಾರಿಯರ್​ಗಳಿಲ್ಲ. ಈ ಹಿಂದೆಯೂ ಕಾವೇರಿ ಹೋರಾಟದಲ್ಲಿ ಚಿತ್ರರಂಗ ಪಾಲ್ಗೊಂಡಿದೆ. ಈಗಲೂ ಇರಲಿದೆ, ಮುಂದೆಯೂ ಪಾಲ್ಗೊಳ್ಳಲಿದೆ" ಎಂದು ಹೇಳಿದರು.

"ಕಾವೇರಿ ನೀರಿನ ವಿಚಾರ ಎರಡು ರಾಜ್ಯಗಳ ಭಾವನೆಗೆ ಸಂಬಂಧಿಸಿದ್ದು, ಆ ಸಮಸ್ಯೆಯನ್ನು ಸುಪ್ರೀಂಕೋರ್ಟ್​ ಹಾಗೂ ಪ್ರಾಧಿಕಾರದ ಗಮನಕ್ಕೆ ತರಬೇಕು. ಹೀಗೆ ಕೆಲಸ ಮಾಡಿದರೆ ಮಾತ್ರ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ ದೊರಕುತ್ತದೆ" ಎಂದು ನಟ ಅವಿನಾಶ್ ಹೇಳಿದರು.