ನ್ಯೂಸ್

ನಟ ಅಜಿತ್ ಕುಮಾರ್​ ಸಿನಿಮಾಗೆ ಸಂಕಷ್ಟ; 5 ಕೋಟಿಗೆ ಡಿಮ್ಯಾಂಡ್ ಇಟ್ಟ ಸಂಗೀತ ನಿರ್ದೇಶಕ; Notice

Notice | ಹಿರಿಯ ಸಂಗೀತ ಸಂಯೋಜಕ ಇಳಯರಾಜ ಅವರು ಮಂಗಳವಾರ (ಏಪ್ರಿಲ್ 15) ನಟ ಅಜಿತ್ ಕುಮಾರ್ ಅವರ ಗುಡ್ ಬ್ಯಾಡ್ ಅಗ್ಲಿ ಎಂಬ ಚಿತ್ರದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್‌ಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.

ಈ ಚಿತ್ರದಲ್ಲಿ ಅವರ ಹಾಡುಗಳನ್ನು ಯಾವುದೇ ಅನುಮತಿಯಿಲ್ಲದೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಗೀತ ಸಂಯೋಜಕರು ಚಿತ್ರದ ಹಾಡುಗಳನ್ನು ತೆಗೆದುಹಾಕುವಂತೆ ಕೇಳಿಕೊಂಡಿದ್ದು, ಪರಿಹಾರವಾಗಿ 5 ಕೋಟಿ ರೂ.ಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನೋಟಿಸ್ ಕೊಟ್ಟಿದ್ಯಾಕೆ?

ಅಜಿತ್ ಕುಮಾರ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಈಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಒತ್ತಾ ರುಪಾಯುಮ್ ಥಾರೆನ್, ಇಲಮೈ ಇಧೊ ಇಧೋ, ಎನ್ ಜೋಡಿ ಮಂಜಾ ಕುರುವಿ ಎಂಬ ಹಳೆಯ ತಮಿಳು ಸಿನಿಮಾ ಹಾಡುಗಳನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಾಡುಗಳನ್ನು ಬಳಕೆ ಮಾಡಿಕೊಳ್ಳಲು ಚಿತ್ರತಂಡ ಇಳಯರಾಜಾ ಅವರ ಬಳಿ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ ಇದೀಗ ಈ ಸಿನಿಮಾದ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳಿಸಿರುವ ಇಳಯರಾಜಾ 5 ಕೋಟಿ ರೂ. ಪರಿಹಾರ ಕೋರಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅನುಮತಿ ಪಡೆಯದೆ ಮತ್ತು ಅವರು ಶಾಸನಬದ್ಧವಾಗಿ ಅರ್ಹರಾಗಿರುವ ರಾಯಲ್ಟಿಯನ್ನೂ ಸಹ ಪಾವತಿ ಮಾಡದೇ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಲೀಗಲ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಈ ಸಂಬಂಧ ಗುಡ್ ಬ್ಯಾಡ್ ಅಗ್ಲಿ ಚಿತ್ರತಂಡ ಈ ಲೀಗಲ್ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಲ್ಕೇ ದಿನಗಳಿಗೆ ಈ ಸಿನಿಮಾವು 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆಧಿಕ್ ರವಿಚಂದ್ರನ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ.

ಸಂಗೀತ ನಿರ್ದೇಶಕ ಇಳಯರಾಜ ಅವರು ಈ ರೀತಿ ಚಿತ್ರತಂಡವೊಂದಕ್ಕೆ ಲೀಗಲ್ ನೊಟೀಸ್ ಕಳುಹಿಸಿರುವುದು ಇದೇ ಮೊದಲಲ್ಲ. 'ಮಂಜುಮ್ಮೆಲ್ ಬಾಯ್ಸ್' ಚಿತ್ರದಲ್ಲಿ ಇಳಯರಾಜ ಅವರ 'ಕಣ್ಮಣಿ ಅನ್ನೋಡು' ಹಾಡನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಅವರ ಕಾನೂನು ತಂಡವು ಆರೋಪಿಸಿ, 60 ಲಕ್ಷ ಪರಿಹಾರ ಪಡೆದಿತ್ತು.

(ಏಜೆನ್ಸೀಸ್)