ನ್ಯೂಸ್

ಸ್ವಯಂ ನಿರ್ಬಂಧಕ್ಕೆ ವರ್ತಕರ ಬೆಂಬಲ

Mysuru Rural

ತಲಕಾಡು: ಕರೊನಾ ಕಂಟಕದಿಂದ ಪಾರಾಗಲು ಗ್ರಾಮದ ಮುಖಂಡರು ಕೈಗೊಂಡಿದ್ದ ಸ್ವಯಂ ನಿರ್ಬಂಧಕ್ಕೆ ಇಲ್ಲಿನ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬುಧವಾರ ಬೆಳಗ್ಗೆ 6ರಿಂದಲೇ ವ್ಯಾಪಾರ ಆರಂಭಿಸಿದ ವರ್ತಕರು, ಮಧ್ಯಾಹ್ನ 2ಕ್ಕೆ ಸರಿಯಾಗಿ ಅಂಗಡಿಗಳನ್ನು ಬಂದ್ ಮಾಡಿ ಮನೆ ಸೇರಿಕೊಂಡರು. ಜು.31ರವರೆಗೆ ಸ್ವಯಂ ನಿರ್ಬಂಧ ಮುಂದುವರಿಯಲಿದ್ದು, ಮುಂದಿನ ಬೆಳವಣಿಗೆ ನೋಡಿಕೊಂಡು ಲಾಕ್‌ಡೌನ್ ಮುಂದುವರಿಸಬೇಕೇ ಅಥವಾ ಕೈಬಿಡಬೇಕೆ ಎಂಬುದನ್ನು ಮರು ಪರಿಶೀಲಿಸಲು ಮತ್ತೊಮ್ಮೆ ಸಭೆ ಸೇರಲಿದ್ದಾರೆ.

ವ್ಯವಹಾರ ಬಂದ್ ಆಗಿದ್ದರಿಂದ ಮಧ್ಯಾಹ್ನದ ನಂತರ ಗ್ರಾಮದ ರಸ್ತೆಗಳು ಬಿಕೋ ಎನ್ನುತ್ತಿತ್ತು. ದಿನಸಿ, ತರಕಾರಿ, ಹೋಟೆಲ್ ಟೀ ಅಂಗಡಿ, ಬೇಕರಿ, ಎಲೆಕ್ಟ್ರಿಕಲ್ ಸ್ಟೋರ್, ಹಾರ್ಡ್‌ವೇರ್, ಸಲೂನ್ ಶಾಪ್, ಬಟ್ಟೆ ಅಂಗಡಿ, ಸ್ಕೂಟರ್ ರಿಪೇರಿ, ವೆಲ್ಡಿಂಗ್ ಶಾಪ್, ಪೆಟ್ರೋಲ್ ಬಂಕ್ ಸೇರಿ ಎಲ್ಲವೂ ಮಧ್ಯಾಹ್ನದ ನಂತರ ಬಂದ್ ಆಗಿತ್ತು.

ಪಂಚಲಿಂಗ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಎಸ್‌ಬಿಐ ಶಾಖೆ ಸೇರಿ ಎಲ್ಲ ಬ್ಯಾಂಕ್‌ಗಳನ್ನು ಮಧ್ಯಾಹ್ನದ ನಂತರ ಬಂದ್ ಮಾಡಲಾಗಿತ್ತು.