ನವದೆಹಲಿ: ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 5,000 ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕೇರಳದಲ್ಲಿ ಅತಿ ಹೆಚ್ಚು ವ್ಯಾಧಿ ಪೀಡಿತರಿದ್ದು ಗುಜರಾತ್, ಪಶ್ಚಿಮ ಬಂಗಾಳ ಮತ್ತು ದೆಹಲಿ ನಂತರದ ಸ್ಥಾನಗಳಲ್ಲಿವೆ. ದೇಶದಲ್ಲಿ 5,364 ಸಕ್ರಿಯ ಕೇಸ್ಗಳಿದ್ದು ಶುಕ್ರವಾರ ಬೆಳಿಗ್ಗೆ ವರೆಗಿನ 24 ಗಂಟೆಗಳಲ್ಲಿ ನಾಲ್ಕು ಜನರು ಕೋವಿಡ್ಗೆ ಬಲಿಯಾಗಿದ್ದಾರೆ. ಬಹುತೇಕ ಪ್ರಕರಣಗಳು ಸೌಮ್ಯ ಸ್ವರೂಪದ್ದಾಗಿದ್ದು ಮನೆಗಳಲ್ಲೇ ಆರೈಕೆಯಿಂದ ನಿರ್ವಹಿಸಬಹುದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ನಡುವೆ, ಕರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕತೆಯನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಮಾಡಲಾಗುತ್ತಿರುವ ಸಿದ್ಧತೆಯ ಪರಿಶೀಲನೆಗೆ ಕೇಂದ್ರ ಸಕಾರ ಅಣಕು ಕವಾಯತು ನಡೆಸುತ್ತಿದೆ.
ರಾಜ್ಯಗಳಿಗೆ ಕೇಂದ್ರ ನಿರ್ದೇಶನ: ಆಮ್ಲಜನಕ, ಐಸೊಲೇಶನ್ ಬೆಡ್ಗಳು, ವೆಂಟಿಲೇಟರ್ಗಳು ಮತ್ತು ಅಗತ್ಯ ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸುವಂತೆ ರಾಜ್ಯಗಳಿಗೆ ಕೇಂದ್ರ ನಿರ್ದೇಶನ ನೀಡಿದೆ. ಈ ವರ್ಷ ಜನವರಿಯಿಂದೀಚೆಗೆ ದೇಶದಲ್ಲಿ ಇದುವರೆಗೆ ಕೋವಿಡ್ನಿಂದ 55 ಜನರು ಮೃತಪಟ್ಟಿದ್ದಾರೆ. ಮೇ 22ರಂದು 257 ಸಕ್ರಿಯ ಪ್ರಕರಣ ಇದೀಗ ಐದು ಸಾವಿರವನ್ನು ದಾಟಿದೆ.
ಸರಣಿ ಸಭೆಗಳು
ಆರೋಗ್ಯ ಸೇವೆಗಳ ಮಹಾ ನಿರ್ದೇಶಕಿ ಸುನಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಜೂನ್ 2 ಮತ್ತು 3ರಂದು ತಾಂತ್ರಿಕ ಪರಿಶೀಲನಾ ಸರಣಿ ಸಭೆಗಳು ನಡೆದಿವೆ.