ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಸೇವಾ ನ್ಯೂನತೆ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದರು. ಸಾರ್ವಜನಿಕರ ದೂರುಗಳನ್ನು ಆಲಿಸಿದರು.
ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ನೀಡಬೇಕು. ಆದರೆ ಅವರಿಂದಲೂ ಹಣ ಪಡೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಹೀಗೆ ಹಣ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಿಪಿಎಲ್ ಕಾರ್ಡ್‌ದಾರರಿಗೆ ಚಿಕಿತ್ಸೆ ನೀಡುವಲ್ಲಿ ಆಗುತ್ತಿರುವ ವಿಳಂಬ ಮತ್ತು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಅವರು, ಆಸ್ಪತ್ರೆಯ ಕೌಂಟರ್‌ಗಳಲ್ಲಿನ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದರು.
ತ್ವರಿತವಾಗಿ ಸ್ಕಾೃನಿಂಗ್ ಸೌಕರ್ಯ ಸಿಗುತ್ತಿಲ್ಲ. ಇಲ್ಲಿನ ತೊಂದರೆಗಳನ್ನು ನಿವಾರಿಸಬೇಕು. ಔಷಧ ವಿಭಾಗದಲ್ಲಿ ಅಗತ್ಯ ಔಷಧಗಳ ಸಂಗ್ರಹವಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಗತ್ಯ ಔಷಧಗಳ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು. ಯಾವ ಕಾರಣಕ್ಕೂ ರೋಗಿಗಳು ಆಸ್ಪತ್ರೆಯ ಹೊರಗೆ ಔಷಧ ಖರೀದಿಸುವ ಸ್ಥಿತಿ ಬರಬಾರದು ಎಂದು ತಿಳಿಸಿದರು.
ಸರ್ಕಾರ ಬಡ ರೋಗಿಗಳನ್ನೇ ಲೂಟಿ ಮಾಡುತ್ತಿದೆ. ಗ್ಯಾರಂಟಿ ಯೋಜನೆಗೆ ಹಣ ಜೋಡಿಸಲು ಬಡವರಿಂದ ಹಣ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಬಂದ ಮೇಲೆ ಸರ್ಕಾರಿ ಆಸ್ಪತ್ರೆಯ ಶುಲ್ಕ ಹೆಚ್ಚಾಗಿದೆ. ಪ್ರಮುಖ ಔಷಧಗಳನ್ನು ವೈದ್ಯರು ಹೊರಗಡೆ ಬರೆದುಕೊಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಬಳಸಲು ಪ್ರತಿನಿತ್ಯ 10 ಸಾವಿರ ರೂ. ನಿಧಿಯಿದ್ದರೂ ಅದು ದುರ್ಬಳಕೆಯಾಗುತ್ತಿದೆ ಎಂದು ದೂರಿದರು.
ವೈದ್ಯರನ್ನು ವಿಚಾರಿಸಿದರೆ ಮೂರು ತಿಂಗಳು ಕಳೆದರೂ ಔಷಧಗಳು ಬಂದಿಲ್ಲ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಮೆಗ್ಗಾನ್ ಸಿಬ್ಬಂದಿ ಹೇಳುತ್ತಿದ್ದಾರೆ. ಹೀಗಾದರೆ ಬಡವರ ಸ್ಥಿತಿ ಏನು ಎಂದು ಅಸಮಾಧಾನ ವ್ಯಕ್ತಪಡಿಸಿದರು.