ಕೋಲಾರದ ಟಿಎಪಿಸಿಎಂಎಸ್​ನಿಂದ ಹಮ್ಮಿಕೊಂಡಿದ್ದ 2023&24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಅಧ್ಯಕ್ಷ ವಡಗೂರು ರಾಮು ಉದ್ಘಾಟಿಸಿದರು. ಉಪಾಧ್ಯಕ್ಷ ಎಲ್​.ಆರ್​.ರಾಜಣ್ಣ, ಎ.ಸಿ.ಭಾಸ್ಕರ್​, ಶ್ರೀನಿವಾಸ್​, ವಿ.ಎಸ್​ ರಘುನಾಥ್​, ಟಿ.ವಿ.ಮುನಿಯಪ್ಪ, ಎನ್​.ಮುನಿರಾಜು, ಶಿಲ್ಪಾ ಮಂಜುನಾಥ್​, ಸುನಂದಾ ನಾಗರಾಜ್​, ಕೆ.ವಿ.ಸುರೇಶ್​, ಸೋಮಣ್ಣ ಇದ್ದರು. 
ನ್ಯೂಸ್

2 ವಾರದಲ್ಲಿ ಔಷಧ ಮಳಿಗೆ ತೆರೆಯಲು ಕ್ರಮ

ಕೋಲಾರ: ಟಿಎಪಿಸಿಎಂಎಸ್​ನಿಂದ ನೂತನ ಗೋಡನ್​ ನಿರ್ಮಾಣಕ್ಕಾಗಿ 3 ಎಕರೆ ಜಾಗ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ 2 ವಾರದಲ್ಲಿ ಕೀಟನಾಶಕ ಮಾರಾಟ ಮಳಿಗೆ ತೆರೆಯಲಾಗುವುದು ಎಂದು ಟಿಎಪಿಸಿಎಂಎಸ್​ ಅಧ್ಯಕ್ಷ ವಡಗೂರು ವಿ.ರಾಮು ಹೇಳಿದರು.

ನಗರದಲ್ಲಿ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂ ಮತ್ತು ಜನತಾ ಬಜಾರ್​ ನಿಯಮಿತ (ಟಿಎಪಿಸಿಎಂಎಸ್​)ನಿಂದ ಬುಧವಾರ ಹಮ್ಮಿಕೊಂಡಿದ್ದ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಹೊಸ ಗೋಡನ್​ ನಿರ್ಮಾಣಕ್ಕೆ ಆಡಳಿತ ಮಂಡಳಿಯಲ್ಲಿ ಚರ್ಚಿಸಲಾಗಿದೆ. ಸೋಸೈಟಿ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅಗತ್ಯ. ಷೇರುದಾರರಿಗೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಕ್ರಮವಹಿಸಲಾಗಿದೆ ಎಂದರು.
ಸಹಕಾರಿ ಸಂಘದಲ್ಲಿ ರಾಜಕಾರಣ ಮಾಡದೇ ಪಕ್ಷಾತಿತವಾಗಿ ರೈತರಿಗೆ ರಸಗೊಬ್ಬರಗಳ ಮಾರಾಟ ಮಾಡಲಾಗುತ್ತಿದೆ. ಜತೆಗೆ ಸಾರ್ವಜನಿಕರಿಗೆ ಅಕ್ಕಿ ವಿತರಣೆ ಮೂಲಕ ಅವಿಭಜಿತ ಕೋಲಾರ ಜಿಲ್ಲೆಗೆ ಮಾದರಿ ಸೊಸೈಟಿಯಾಗಿ ಮುಂಚೂಣಿಯಲ್ಲಿದೆ. ಮುಂದೆ ಔಷಧ ಮಳಿಗೆ ಪ್ರಾರಂಭಿಸಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಔಷಧ ದೊರೆಯುವಂತೆ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 16.53 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ಟಿಎಪಿಸಿಎಂಎಸ್​ ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿ, ಹೋಬಳಿ ಸೊಸೈಟಿಗಳಲ್ಲಿ 500 ರೂ. ಇದ್ದ ಷೇರು ಹಣ 1,000 ರೂ. ಮಾಡಲಾಗಿದೆ. ಅದೇ ರೀತಿ ತಾಲೂಕು ಸೊಸೈಟಿಯಲ್ಲಿ 2,000 ರೂ. ಷೇರು ಕಟ್ಟುವ ಮೂಲಕ ಸಂಘಕ್ಕೆ ಬರುವ ಲಾಭವನ್ನು ರೈತರ ಅಭಿವೃದ್ಧಿಗೆ ಕೊಡಲಾಗುತ್ತದೆ ಎಂದು ಹೇಳಿದರು.

ಸಾಲ ತಿರಿಸಿಕೊಳ್ಳಲು ಸಲಹೆ
ಸೊಸೈಟಿಗೆ ಆದಾಯ ಮೂಲ ಇದ್ದು, ಬೇರೆ ಬ್ಯಾಂಕ್​ಗಳಲ್ಲಿ ತೆಗೆದುಕೊಂಡಿರುವ ಸಾಲವನ್ನು ತೀರಿಸುವ ಮೂಲಕ, ಹೆಚ್ಚಿಸಿಕೊಳ್ಳಲು ಆಡಳಿತ ಮಂಡಳಿಯು ಮುಂದಾಗಬೇಕು ಎಂದು ಸದಸ್ಯ ಅಬ್ಬಣಿ ಶಂಕರ್​ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ಅಧ್ಯಕ್ಷ ವಡಗೂರು ರಾಮು, ವಾಣಿಜ್ಯ ಮಳಿಗೆಗಳಿಗೆ ಕಾಲಕ್ಕೆ ತಕ್ಕಂತೆ ಬಾಡಿಗೆ ದರ ನಿಗದಿ ಮಾಡಿದ್ದು, ಪ್ರತಿ ತಿಂಗಳು ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಸ್​ಆರ್​ ದರಕ್ಕೆ ತಕ್ಕಂತೆ ಬಾಡಿಗೆ ನಿಗದಿಪಡಿಸಿ
ಸೋಸೈಟಿಯಿಂದ ನಿರ್ಮಾಣ ಮಾಡಿರುವ ಕಟ್ಟಡಗಳ ಬಾಡಿಗೆ ಹೆಚ್ಚಿಸಬೇಕು. ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಎಸ್​ಆರ್​ ದರ ಪಟ್ಟಿ ಪಡೆದು ಬಾಡಿಗೆ ನಿಗದಿ ಮಾಡಬೇಕು. ಜತೆಗೆ ಹಳೇ ಕಟ್ಟಡಗಳನ್ನು ನವೀಕರಣ ಮಾಡಿ, ಹೊಸ ಬಾಡಿಗೆ ದರ ನಿಗದಿಪಡಿಸಿ ಎಂದು ಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಕೆ.ವಿ.ದಯಾನಂದಹೇಳಿದರು.