ಬೆಂಗಳೂರು: ಬಿಬಿಎಂಪಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್ ಪಾವತಿ ವಿಚಾರದಲ್ಲಿ ಸಣ್ಣ ಪ್ರಮಾಣದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಪಾಲಿಕೆಯ ಕಾಮಗಾರಿಗಳ ವಿಚಾರವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಲೋಪಗಳ ಬಗ್ಗೆ ಪರಾಮರ್ಶೆ ನಡೆಸುವ ಸಂಬಂಧ ತನಿಖೆಗೆ ಹೊಸ ಸರ್ಕಾರ ಆದೇಶಿಸಿದೆ. ಇದರಿಂದಾಗಿ ಬಿಲ್ ಪಾವತಿ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರ ಸಂಘವು ತನ್ನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಇದು ರಾಜಕೀಯ ಚರ್ಚೆಗೂ ಗ್ರಾಸ ಒದಗಿಸಿದ್ದು, ನಗರದಲ್ಲಿ ಹೊಸ ಕಾಮಗಾರಿ ಆರಂಭಿಸಲು ಸಾಧ್ಯವಾಗಿರಲಿಲ್ಲ.
ಇತ್ತೀಚಿಗೆ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಬಾಕಿ ಬಿಲ್ ಪಾವತಿಸಲು ಮನವಿ ಮಾಡಿದ್ದರು. ಇದಕ್ಕೆ ಸಿಎಂ ಹಾಗೂ ಡಿಸಿಎಂ ಸಕಾರಾತ್ಮಕ ಸ್ಪಂದನೆ ನೀಡಿದ ಬಳಿಕ ಈಗ ಕಡಿಮೆ ಮೊತ್ತದ ಕಾಮಗಾರಿ ವಹಿಸಿಕೊಂಡು ಕೆಲಸ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಮೊದಲ ಹಂತದಲ್ಲಿ 25 ಲಕ್ಷ ರೂ. ಮೊತ್ತದ ಕಾಮಗಾರಿ ನಡೆಸಿರುವ ಸಣ್ಣ ಗುತ್ತಿಗೆದಾರರ ಬಿಲ್ ಪಾವತಿಗಾಗಿ 42 ಕೋಟಿ ರೂ. ಬಿಡುಗಡೆ ಮಾಡಲಾಗುತ್ತದೆ. ಉಳಿದ ಗುತ್ತಿಗೆದಾರರ ಬಾಕಿ ಹಣ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಬಿಡುಗಡೆಯಾಗಲಿದೆ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.