ಚಿಕ್ಕಮಗಳೂರು: ನಗರದ ರತ್ನಗಿರಿ ಗಾರ್ಡನ್ ಮಹಾತ್ಮ ಗಾಂಧಿ ಉದ್ಯಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ರತ್ನಗಿರಿ ಉದ್ಯಾನ ಮಹಾತ್ಮಗಾಂಧಿ ಉದ್ಯಾನ ಟ್ರಸ್ಟ್ ಸಭೆಯಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ಉದ್ಯಾನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರ ನಡೆಯಲು ಕ್ರಮ ಕೈಗೊಂಡರೆ ಹೆಚ್ಚು ಜನರು ಬರುವ ಜತೆಗೆ ಪಾರ್ಕ್ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.
ಗಾರ್ಡನ್‌ನಲ್ಲಿ ಈಗಾಗಲೇ ಕೆಲವು ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅಗತ್ಯವಾಗಿ ಬೇಕಾಗಿರುವ ಕೆಲವು ಕೆಲಸಗಳು ತುರ್ತಾಗಿ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಉದ್ಯಾನದಲ್ಲಿ ಗೃಹ ರಕ್ಷಕ ದಳ ಮತ್ತು ಪೊಲೀಸ್ ಸಿಬ್ಬಂದಿ ಹಾಕಲು ಕ್ರಮ ಕೈಗೊಳ್ಳಲಾಗುವುದು. ಉದ್ಯಾನಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಿರಿಯ ನಾಗರಿಕರ ವಿಶ್ರಾಂತಿ ತಾಣ, ಮಕ್ಕಳ ಆಟಿಕೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಗೌರವಧನ ಹೆಚ್ಚಿಸಬೇಕು. ನಗರಸಭೆಯಿಂದ ಪ್ರತಿವರ್ಷ 5 ಲಕ್ಷ ರೂ. 3 ವರ್ಷದಿಂದ ಬಂದಿಲ್ಲದಿರುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಟ್ರಸ್ಟ್ ಸದಸ್ಯರಾದ ಎಂ.ಎಲ್.ಮೂರ್ತಿ ಮಾತನಾಡಿ, ಉದ್ಯಾನಕ್ಕೆ ಸರ್ಕಾರದಿಂದ ಪ್ರತಿವರ್ಷ 25 ಲಕ್ಷ ರೂ. ಬರುವಂತೆ ಸಂಬಂಧಿಸಿದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಿದಲ್ಲಿ ಆದಾಯ ವೃದ್ಧಿಗೆ ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ಕಾರ್ಯದರ್ಶಿ ಮೋಹನ್ ಉದ್ಯಾನದಲ್ಲಿ ಆಗಿರುವ ಹಾಗೂ ಮುಂದೆ ಅಭಿವೃದ್ಧಿಪಡಿಸಬೇಕಾದ ವಿಷಯಗಳನ್ನು ತಿಳಿಸಿದರು.
ನಗರಸಭೆ ಆಯುಕ್ತ ಬಸವರಾಜ್, ಯೋಜನಾ ನಿರ್ದೇಶಕಿ ನಾಗರತ್ನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಟ್ರಸ್ಟ್ ಸದಸ್ಯರಾದ ಕೆ.ಟಿ.ರಾಧಕೃಷ್ಣ, ಹಬೀಬಾ ಎನ್. ಪಾಷಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.