ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ 2012ರಲ್ಲಿ "ಅದ್ಧೂರಿ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದರೂ, ಈ 14 ವರ್ಷಗಳಲ್ಲಿ ನಾಯಕನಾಗಿ ನಟಿಸಿರುವ ಸಿನಿಮಾಗಳ ಸಂಖ್ಯೆ ಕೇವಲ ಆರು. "ಅದ್ಧೂರಿ', "ಬಹದ್ದೂರ್', "ಭರ್ಜರಿ', "ಪೊಗರು', "ಮಾರ್ಟಿನ್', "ಕೆಡಿ' ಬಳಿಕ ಇದೀಗ "ಕ್ರಿಮಿನಲ್' ಶೂಟಿಂಗ್ನಲ್ಲಿ ಅವರು ಬಿಜಿಯಾಗಿದ್ದಾರೆ. ಅವರು ಎಷ್ಟೇ ವೇಗವಾಗಿ ಸಿನಿಮಾಗಳನ್ನು ಮಾಡಿದರೂ, ಕಾರಣಾಂತರಗಳಿಂದ ಬಿಡುಗಡೆ ತಡವಾಗುತ್ತಿತ್ತು. ಜತೆಗೆ ಒಂದು ಸಿನಿಮಾ ರಿಲೀಸ್ ಆಗುವವರೆಗೂ ಧ್ರುವ ಮತ್ತೊಂದು ಚಿತ್ರದಲ್ಲಿ ತೊಡಗುತ್ತಿರಲಿಲ್ಲವಾದ ಕಾರಣ, ಉಳಿದ ಚಿತ್ರಗಳೂ ತಡವಾಗುತ್ತಾ ಬಂದವು. ಆದರೆ, ಈಗ ಧ್ರುವ ಎಚ್ಚೆತ್ತುಕೊಂಡಿದ್ದಾರೆ. ವರ್ಷಕ್ಕೆರಡು ಸಿನಿಮಾ ಮಾಡಲೇಬೇಕು ಅಂತ ದೃಢ ನಿರ್ಧಾರ ಮಾಡಿದ್ದಾರೆ. ಈ ವರ್ಷ ಅವರು ನಟಿಸಿರುವ "ಕೆಡಿ' ಬಿಡುಗಡೆಯಾಗಿದ್ದು, ಮತ್ತೊಂದು ಸಿನಿಮಾ "ಕೆರೆಬೇಟೆ' ಖ್ಯಾತಿಯ ರಾಜಗುರು ನಿರ್ದೇಶಿಸುತ್ತಿರುವ "ಕ್ರಿಮಿನಲ್' ಕೂಡ ಇದೇ ದಸರಾ ಅಥವಾ ದೀಪಾವಳಿಗೆ ತೆರೆಗೆ ಬರುವ ನಿರೀೆ ಇದೆ. ಹಾಗೇ ಇದೇ ಆಗಸ್ಟ್ನಲ್ಲಿ ದುನಿಯಾ ಸೂರಿ ಹಾಗೂ ಡಿಸೆಂಬರ್ನಲ್ಲಿ "777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್ ಆ್ಯಕ್ಷನ್&ಕಟ್ ಹೇಳಲಿರುವ ಎರಡು ಚಿತ್ರಗಳು ಸೆಟ್ಟೇರಲಿವೆ ಎನ್ನಲಾಗಿದೆ.
ರಿಯಲ್ "ಕ್ರಿಮಿನಲ್'!
"ಕ್ರಿಮಿನಲ್' ಚಿತ್ರದ ಶೂಟಿಂಗ್ ಅನುಭವದ ಬಗ್ಗೆ ಧ್ರುವ, "ಈಗಾಗಲೇ ಶೇಕಡಾ 70ರಷ್ಟು ಶೂಟಿಂಗ್ ಮುಗಿದಿದೆ. ಇನ್ನು 35 ದಿನಗಳ ಚಿತ್ರೀಕರಣವಾದ ಬಳಿಕ "ಕ್ರಿಮಿನಲ್' ಪೂರ್ಣಗೊಳ್ಳಲಿದೆ. 2015ರಲ್ಲಿ ನಡೆದ ನೈಜ ಟನೆಯಾಧಾರಿತ ಚಿತ್ರವಿದು. ಆಗ ನಾಯಕ, ನಾಯಕಿ ಎಲ್ಲೆಲ್ಲಿ ಹೋಗಿದ್ದರೋ ಅದೇ ನೈಜ ಸ್ಥಳಗಳಲ್ಲಿ, ನೈಜ ಜನರ ನಡುವೆ ಗೆರಿಲ್ಲಾ ಶಾಟ್ಸ್ನಂತೆ ಶೂಟಿಂಗ್ ಮಾಡುತ್ತಿದ್ದೇವೆ. ಅದಕ್ಕೆಂದೇ ನಾನು ಮತ್ತು ರಚಿತಾ ರಾಮ್ ವರ್ಕ್ಶಾಪ್ ಮಾಡಿದೆವು. ಇಲ್ಲಿ ನಾವು ಸೆಟ್ ಬಳಸಿಲ್ಲ. ಕಾರು ಇಳಿದ ತಕ್ಷಣ ನೈಜವಾಗಿಯೇ ಜನರ ನಡುವೆ ಹೋಗಿ ನಮ್ಮ ಪಾಡಿಗೆ ನಾವು ಡೈಲಾಗ್ ಹೇಳುತ್ತಾ ಹೋಗುತ್ತಿದ್ದೆವು. ಒಂದು ಲಾಂಗ್ ಶಾಟ್, ಒಂದು ವೈಡ್ ಮತ್ತೊಂದು ನಮ್ಮ ಜತೆ ಫಾಲೋ ಮಾಡುತ್ತಿತ್ತು. ಹೀಗೆ ಮೂರು ಕ್ಯಾಮರಾಗಳನ್ನು ಬಳಸಿ ಶೂಟಿಂಗ್ ಮಾಡುತ್ತಿದ್ದೇವೆ. ತೆರೆಯ ಮೇಲೆ ನೋಡಿದರೆ ಪ್ರೇಕ್ಷಕರಿಗೆ ನಮ್ಮ ನಡುವೆಯೇ ನಡೆಯುತ್ತಿರುವ ಕಥೆ ಅಂತನ್ನಿಸುವಷ್ಟು ನೈಜವಾಗಿ ಮೂಡಿಬರುತ್ತಿದೆ. ಹಾಗೇ ಧ್ರುವ ಅಂದಾಕ್ಷಣ ದೊಡ್ಡ ಬಜೆಟ್ ಅನ್ನುತ್ತಾರೆ. ಅದನ್ನು ಬ್ರೇಕ್ ಮಾಡಬೇಕು ಅಂತ ತುಂಬ ಕಡಿಮೆ ಬಜೆಟ್ನಲ್ಲಿ ಮಾಡುತ್ತಿರುವ ಚಿತ್ರವಿದು' ಎಂದು ಹೇಳಿಕೊಳ್ಳುತ್ತಾರೆ ಧ್ರುವ ಸರ್ಜಾ.
ಬಹದ್ದೂರ್ ಹುಡುಗನ ಭರ್ಜರಿ ತಯಾರಿ
ಇನ್ನು "ಕ್ರಿಮಿನಲ್' ಶೂಟಿಂಗ್ ಜತೆಜತೆಗೇ ಹೊಸ ಚಿತ್ರಕ್ಕೆ ಸಿದ್ಧತೆ ನಡೆಸಿರುವ ಧ್ರುವ, ಪಾತ್ರಕ್ಕಾಗಿ ಬರೋಬ್ಬರಿ 21 ಕೆಜಿ ತೂಕ ಇಳಿಸಿಕೊಂಡಿದ್ದಾರೆ. "ಹೊಸ ಚಿತ್ರದಲ್ಲಿ ಮತ್ತೆ ಹಳೆಯ ಲುಕ್ನಲ್ಲಿ ಲವರ್ಬಾಯ್, ರೊಮ್ಯಾಂಟಿಕ್ ಹೀರೋ ರೀತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹೀಗಾಗಿ "ಬಹದ್ದೂರ್', "ಭರ್ಜರಿ' ಲುಕ್ ಬೇಕು ಅಂತ ನಿರ್ದೇಶಕರು ಹೇಳಿದ್ದರು. ನಿರ್ದೇಶಕರು ಕೆಲವೊಮ್ಮೆ ದಪ್ಪ ಆಗಲು, ಕೆಲವೊಮ್ಮೆ ಸಣ್ಣ ಆಗಲು ಹೇಳಬಹುದು. ನಟರಾಗಿ ನಾವು ನಿರ್ದೇಶಕರ ವಿಜನ್ನಂತೆ ಕಾಣಬೇಕು. ಅದಕ್ಕಾಗಿ 21.5 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೇನೆ. ನಾನು ಯಾವುದೇ ಪ್ರೋಟಿನ್ ಅಥವಾ ಸಪ್ಲಿಮೆಂಟ್ ತೆಗೆದುಕೊಳ್ಳುವುದಿಲ್ಲ' ಎಂದು ಮಾಹಿತಿ ನೀಡುತ್ತಾರೆ.