ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಕೈಗಾರಿಕಾ ಸ್ಪಂದನಾ ಸಭೆ ನಡೆಸಿದರು. ಎಚ್.ಆರ್.ರಾಜಪ್ಪ, ಗಣೇಶ್, ಎನ್.ಗೋಪಿನಾಥ್ ಇದ್ದರು.  
ನ್ಯೂಸ್

15 ದಿನದೊಳಗೆ ಮೂಲ ಸೌಕರ್ಯ ಕಲ್ಪಿಸದಿದ್ದರೆ ಕ್ರಮ: ಡಿಸಿ ಎಚ್ಚರಿಕೆ

ನವೀನ ಬಿ.ಎಂ

ಶಿವಮೊಗ್ಗ: ಸಾಗರ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ 10 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಇನ್ನೂ ಅಪೂರ್ಣವಾಗಿದೆ. ಈ ಕಾಮಗಾರಿಯು 15 ದಿನದೊಳಗೆ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸದಿದ್ದಲ್ಲಿ ಕಾಮಗಾರಿ ಮೇಲುಸ್ತುವಾರಿ ವಹಿಸಿಕೊಂಡಿರುವ ಮಹಾನಗರ ಪಾಲಿಕೆ ಸಹಾಯಕ ಅಭಿಯಂತರ ಹಾಲೇಶಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಎಚ್ಚರಿಕೆ ನೀಡಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾಮಟ್ಟದ 189ನೇ ಏಕಗವಾಕ್ಷಿ ಸಮಿತಿ ಸಭೆ ಹಾಗೂ 22ನೇ ಕೈಗಾರಿಕಾ ಸ್ಪಂದನಾ ಸಭೆ ನಡೆಸಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಈ ಸಂಬಂಧ ಉಸ್ತುವಾರಿ ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಅವರಿಗೆ ಸೂಚಿಸಿದರು.
ಸಾಗರ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪಾಲಿಕೆಯಿಂದ ಕಸದ ವಿಲೇವಾರಿ ಆಗುತ್ತಿದೆ. ಪ್ರಸ್ತುತ 24*7 ನೀರಿನ ಸಂಪರ್ಕದ ಕೊರತೆ ಇದ್ದು, ಅದನ್ನು ಪಾಲಿಕೆಯಿಂದ ಶೀಘ್ರವೇ ಒದಗಿಸಲು ಕ್ರಮ ವಹಿಸಲಾಗುವುದು ಎಂದ ಅವರು, ವಸಾಹತು ಮುಂಭಾಗದ ಮುಖ್ಯ ರಸ್ತೆಯಲ್ಲಿ ಟ್ರಕ್ ಹಾಗೂ ಇತರೆ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಆಕಸ್ಮಿಕ ಅಪಘಾತಗಳು ಸಂಭವಿಸುತ್ತಿವೆ ಎಂಬ ಬಗ್ಗೆ ಆರೋಪಗಳಿವೆ. ಈ ಸಂಬಂಧ ಕೈಗಾರಿಕೋದ್ಯಮಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಶೀಘ್ರದಲ್ಲಿ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಸಿಇಒ ಹಾಗೂ ಜಿಲ್ಲಾ ಕೈಗಾರಿಕಾ ಪ್ರದೇಶಾಭಿವೃದ್ಧಿ ಸಮಿತಿಯ ನೋಡಲ್ ಅಧಿಕಾರಿ ಎಚ್.ಆರ್.ರಾಜಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಸೇರಿ ವಿವಿಧ ಕೈಗಾರಿಕಾ ಸಂಘಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸಸ್ಥಿತರಿದ್ದರು.

ಖೋಡೇಸ್ ಕಂಪನಿ ಜಾಗ ಹಿಂಪಡೆಯಲು ಸಲಹೆ
ಈ ಪ್ರದೇಶದಲ್ಲಿ ಖೊಡೇಸ್ ಕಂಪನಿಯ ಕೈಗಾರಿಕಾ ಘಟಕಗಳನ್ನು ತೆರೆಯಲು ದಶಕಗಳ ಹಿಂದೆಯೇ ಸುಮಾರು 140 ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಅವರು ಆ ಭೂಮಿಯನ್ನು ಸ್ವತಃ ತಾವೂ ಬಳಸದೇ, ಇತರರಿಗೂ ಅವಕಾಶ ನೀಡದೆ ಹಾಗೆಯೇ ಉಳಿದಿದೆ. ಆದ್ದರಿಂದ ಸದರಿ ಭೂಮಿಯ ಒಡೆತನ ಹೊಂದಿರುವ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಿಕೊಂಡು ಭೂಮಿಯನ್ನು ವಶಕ್ಕೆ ಪಡೆದು ಇತರ ಆಸಕ್ತರಿಗೆ ಹಂಚಿಕೆ ಮಾಡುವುದರಿಂದ ಕೈಗಾರಿಕಾ ಪ್ರದೇಶ ವಿಸ್ತರಣೆಗೊಳ್ಳಲಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕೋದ್ಯಮಿಗಳು ಸಲಹೆ ನೀಡಿದರು.

3 ತಿಂಗಳು ಕಾಲಾವಕಾಶ ನೀಡಿ ಮಾಲೀಕತ್ವ ಪರಬಾರೆ
ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ ಉತ್ಪನ್ನ ತಯಾರಿಸಲು ಹಾಗೂ ಘಟಕಕ್ಕೆ ಮುಂದಾಗಿರುವ 50 ಎಚ್‌ಪಿ ವಿದ್ಯುತ್‌ಗೆ ಹೆಚ್ಚುವರಿಯಾಗಿ 150 ಎಚ್‌ಪಿ ವಿದ್ಯುತ್ ಮಂಜೂರಾತಿಗಾಗಿ ಕೋರಿಕೆ ಸಲ್ಲಿಸಿರುತ್ತಾರೆ. ಅಲ್ಲದೇ ಅಲ್ಲಿನ ಎಸ್‌ಜಿಕೆ ಇಂಡಸ್ಟ್ರಿಸ್‌ನ ಹೆಸರನ್ನು ಬದಲಾಯಿಸಿಕೊಳ್ಳಲು ಅನುಮತಿ ನೀಡುವಂತೆ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಮೆ.ರಹಮಾನಿಯ ಕಾಂಕ್ರಿಟ್ ಪ್ರೊಡಕ್ಟ್ ಘಟಕಕ್ಕೆ ಹೆಚ್ಚಿನ ವಿದ್ಯುತ್ ಸರಬರಾಜು ಮಾಡುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯುವಂತೆ ಸೂಚಿಸಿದರು. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನ ಹಂಚಿಕೆಗೆ ಪಡೆದು ಮಂಡಳಿಯ ನಿಯಮಾನುಸಾರ ಘಟಕ ಸ್ಥಾಪಿಸದಿರುವವರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ತಿಳುವಳಿಕೆ ನೀಡುವಂತೆ ಹಾಗೂ ಡಿಸೆಂಬರ್ 31ರೊಳಗಾಗಿ ಪ್ರತಿಕ್ರಿಯಿಸದಿದ್ದಲ್ಲಿ ಮಾಲೀಕತ್ವವನ್ನು ಪರಬಾರೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚಿಸಿದರು.

ಶಿವಮೊಗ್ಗ ಹೊರವಲಯದ ನಿದಿಗೆ ಕೈಗಾರಿಕಾ ಪ್ರದೇಶದ ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈ.ಲಿ. ಘಟಕದ ಮಾಲಿನ್ಯದಿಂದ ವಾತಾವರಣ ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ಬಗ್ಗೆ ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಪಡೆದು ನಿಯಮಾನುಸಾರ ಕ್ರಮಕ್ಕೆ ಶಿಫಾರಸು ಮಾಡಲಾಗುವುದು.
ಡಾ. ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ