ಬೆಂಗಳೂರು: ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಒತ್ತುವರಿ ಮಾಡಿ ಉಪ ಖನಿಜ ತೆಗೆದು ರಾಯಧನ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ದಂಡ ಹಾಗೂ ರಾಯಧನ ರೂಪದ 6105 ಕೋಟಿ ರೂ.ಗಳನ್ನು ಒನ್ ಟೈಮ್ ಸೆಟಲ್‌ಮೆಂಟ್ ಮೂಲಕ ವಸೂಲಿ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಒತ್ತುವರಿ ಮಾಡಿ ಉಪ ಖನಿಜ ತೆಗೆದಿರುವ ಬಗ್ಗೆ ಆಡಿಟ್ ಮಾಡಲಾಗಿದ್ದು, ಸೂಚಿತ ಆಡಿಟ್ ಗಿಂತ ಹೆಚ್ಚು ಉಪ ಖನಿಜ ತೆಗೆದು ರಾಯಧನ ಪಾವತಿಸಿರಲಿಲ್ಲ. 8 ವರ್ಷದಿಂದ ಈ ಹಣ ವಸೂಲಾಗಿರಲಿಲ್ಲ. ಈಗ ಒನ್ ಟೈಮ್ ಸೆಟಲ್‌ಮೆಂಟ್ ಮೂಲಕ ರಾಯಧನ ವಸೂಲು ಮಾಡಲು ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ, ಸಂಪುಟ ಉಪ ಸಮಿತಿ ಈ ಹಣ ವಸೂಲು ಮಾಡುವ ಕುರಿತು ನೀತಿ ನಿರೂಪಿಸಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಸಂದಾಯವಾಗಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆ ವಿತರಣೆ ವಿಚಾರದಲ್ಲಿ ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸಲು ನಿರ್ಣಯಿಸಲಾಗಿದೆ. ಕೆಟಿಪಿಪಿ ಕಾಯ್ದೆ ಅನ್ವಯ ಈ ಖರೀದಿ ಮಾಡಲಾಗುತ್ತದೆ. ಇದರಿಂದ ಖರೀದಿ ಪಾರದರ್ಶಕವಾಗಿ ನಡೆಯಲಿದೆಯಲ್ಲದೆ, ಖರೀದಿ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದು ಹೇಳಿದರು. ಈ ಮೊದಲು ತಾಲೂಕು ಮಟ್ಟದಲ್ಲಿ ಖರೀದಿ ಮಾಡಲಾಗುತ್ತಿತ್ತು.
ಇನ್ನು ಕೆಲವು ಕಡೆ ಅಂಗನವಾಡಿ ಕಾರ್ಯಕರ್ತೆಯರೇ ತಮ್ಮ ಸ್ವಂತ ದುಡ್ಡಿನಿಂದ ಖರೀದಿಸುತ್ತಿದ್ದರು. ಅವರಿಗೆ ಸಕಾಲದಲ್ಲಿ ಹಣ ಪಾವತಿ ಆಗುತ್ತಿರಲಿಲ್ಲ. ಅವರು ಮುಂಗಡ ಹಣ ನೀಡುವಂತೆ ಕೇಳಿದ್ದರು. ಅದಕ್ಕೆ ಕಾಯ್ದೆಯಲ್ಲಿ ಅವಕಾಶ ಇಲ್ಲದೇ ಇರುವುದರಿಂದ ವಿಭಾಗವಾರು ಟೆಂಡರ್ ಕರೆದು ಮೊಟ್ಟೆ ವಿತರಣೆಗೆ ತೀರ್ಮಾನ ಮಾಡಲಾಗಿದೆ. ಮೊಟ್ಟೆ ಖರೀದಿಗೆ 297.19 ಕೋಟಿ ರೂ. ಮೀಸಲಿರಿಸಲಾಗಿದೆ. ಮೊಟ್ಟೆಯೊಂದಕ್ಕೆ 6 ರೂ.ಮೀರದಂತೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಎಪಿಎಂಸಿಗಳಿಗೆ ಮೂಲಸೌಕರ್ಯ:
ಆರ್‌ಐಡಿಎ್ ಯೋಜನೆ ಅಡಿ ಎಪಿಎಂಸಿಗಳಿಗೆ ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು 130.50 ಕೋಟಿ ರೂ.ಗಳ ಮಂಜೂರಾತಿಗೆ ನಿರ್ಣಯ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಪ್ರವರ್ಗ 3 ರ ಅಡಿ ಕೊಡಗರು ಎಂದಿರುವುದು ಕೊಡವ, ಕೊಡವರು ಎಂದು ಬದಲಿಸಲು ಅನುಮೋದನೆ ನೀಡಲಾಗಿದೆ. ಈ ಬಗ್ಗೆ ಸಾಕಷ್ಟು ಮನವಿ ಬಂದಿದ್ದವು. ಹಿಂದುಳಿದ ವರ್ಗಗಳ ಆಯೋಗ ಕೂಡ ಈ ಬಗ್ಗೆ ಶಿಾರಸು ಮಾಡಿತ್ತು. ಅಲ್ಲದೆ, ಕೊಡವ ಪರಿಷತ್ತು ಒತ್ತಾಯಿಸಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ಈ ಬಗ್ಗೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲು ತೀರ್ಪು ನೀಡಿತ್ತು. ಅದರ ಅನ್ವಯ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.
ಸಿ.ರಾಜಶೇಖರ್ ನೇಮಕಕ್ಕೆ ಅನುಮತಿ:
ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾಯಾಧೀಶ ಸಿ.ರಾಜಶೇಖರ್ ಅವರನ್ನು 1 ವರ್ಷ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸಮ್ಮತಿ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಡಿ ಕೆಎಎಸ್ ಹುದ್ದೆ ನೇಮಕ ಮನವಿ ಪುರಸ್ಕರಿಸಿ, ಡಾ.ಮೈತ್ರಿ ಅವರಿಗೆ ಸೂಪರ್ ನ್ಯೂಮರಿ ಪೋಸ್ಟ್ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಧಾಮಗಳ ಸುತ್ತಮುತ್ತಲಿನ ಪ್ರದೇಶ ಪರಿಸರ ಸೂಕ್ಷ್ಮ ವಲಯವೆಂದು ೋಷಣೆ ಮಾಡುವ ಸಂಬಂಧ ಅಧ್ಯಯನ ನಡೆಸಲು ಸಚಿವ ಸಂಪುಟ ಸಮಿತಿ ನೇಮಕ ಮಾಡಲು ಮುಖ್ಯಮಂತ್ರಿಗಳಿಗೆ ಸಂಪುಟ ಅಧಿಕಾರ ನೀಡಿದೆ ಎಂದು ತಿಳಿಸಿದರು.
ಚರಕ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ:
ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಆಸ್ಪತ್ರೆ ನಿರ್ಮಾಣಕ್ಕೆ 22.70 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದೇ ರೀತಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಪ್ರೋ ಯೂರಾಲಜಿ ಸಂಸ್ಥೆಗೆ ಅನೆಕ್ಸ್ ಕಟ್ಟಡಕ್ಕೆ 26 ಕೋಟಿ ಪರಿಷ್ಕರಥ ಅಂದಾಜಿಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಪೈಕಿ 8.50 ಕೋಟಿ ರೂ. ರಾಜ್ಯ ಸರ್ಕಾರದಿಂದ 17.50 ಕೋಟಿ ರೂ.ಗಳನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಕ್ರೋಢೀಕರಿಸಿ ವಿನಿಯೋಗಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದರು.
ಮುದ್ದೇನಹಳ್ಳಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ವಿಷಯ ಚರ್ಚೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.
ರಸ್ತೆ ನಿಯಂತ್ರಣ, ಅಭಿವೃದ್ಧಿ ಪ್ರಾಧಿಕಾರ ಅಸ್ಥಿತ್ವಕ್ಕೆ:
ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ಥಿತ್ವಕ್ಕೆ ತರಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.
ಲೋಕೋಪಯೋಗಿ ಇಲಾಖೆಯಡಿ ಪಿಪಿಪಿ ಯೋಜನೆಯಡಿ ಮಾತ್ರ ಅನ್ವಯವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.
ಈ ಪ್ರಾಧಿಕಾರವು ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ ಯೋಜನೆಯ ಆದ್ಯತಾ ಪಟ್ಟಿಗಳನ್ನು ರಚಿಸಲಿದೆ. ಅಂತಾರಾಜ್ಯ ಸಂಪರ್ಕಿಸುವ ಹೆದ್ದಾರಿಗಳು, ಕೈಗಾರಿಕಾ ಕಾರಿಡಾರ್, ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಯೋಜನಾ ವರದಿ ಹಾಗೂ ಕಾರ್ಯಸಾಧ್ಯತಾ ವರದಿ ತಯಾರಿಸುವುದು, ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಿಸಲು ಸೂಕ್ತ ಯೋಜನೆ ರಚಿಸುವುದು, ತಾತ್ವಿತ ಅನುಮೋದನೆ ನೀಡುವುದು ಈ ಪ್ರಾಧಿಕಾರದ ಉದ್ದೇಶಗಳಾಗಿವೆ. ಪಿಪಿಪಿ ಗುತ್ತಿಗೆಗಳ ಸಂಗ್ರಹಣೆ, ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಅತ್ಯುತ್ತಮ ಮಾನದಂಡಗಳ ಅನುಗುಣವಾಗಿ ಮಾರ್ಗಸೂಚಿಗಳನ್ನು ಹಾಗೂ ಸಂಗ್ರಹಣ ವಿಧಾನಗಳನ್ನು ರಚನೆ ಮಾಡುವುದು ಈ ಪ್ರಾಧಿಕಾರ ರಚನೆ ಹಿಂದಿನ ಉದ್ದೇಶ ಎಂದು ಎಚ್..ಕೆ.ಪಾಟೀಲ ತಿಳಿಸಿದರು.
ಯಾರೋ ಒಬ್ಬರ ವೈಯಕ್ತಿಕ ಹಿತಕ್ಕಾಗಿ ಈ ಪ್ರಾಧಿಕಾರ ರಚನೆ ಮಾಡುವುದಿಲ್ಲ. ಇದರ ಅವಶ್ಯಕತೆಯನ್ನು ಸರ್ಕಾರ ಮನಗಂಡಿದೆ. ಇಂತಹ ಪ್ರಾಧಿಕಾರ ಅವಶ್ಯಕತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.
ಹಾಲಿನ ದರ 3 ರೂ. ಹೆಚ್ಚಳಕ್ಕೆ ಅಸ್ತು:
ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡುವ ಕುರಿತು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಹಾಲು ಒಕ್ಕೂಟಗಳು ಹಾಗೂ ಕೆಎಂಎ್ ಅಧ್ಯಕ್ಷರ ಸಭೆಯಲ್ಲಿ ಇತ್ತೀಚೆಗೆ ಲೀಟರ್‌ಗೆ 3 ರೂ. ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಈ ಹೆಚ್ಚಳಕ್ಕೆ ಈಗ ಸಚಿವ ಸಂಪುಟದ ಮುದ್ರೆ ಸಿಕ್ಕಿದೆ.
67 ಸಜಾ ಬಂಧಿಗಳ ಬಿಡುಗಡೆ:
ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರದ ಮಾರ್ಗಸೂಚಿ ಗಮನದಲ್ಲಿಟಗ್ಟುಕಿಂಡು 67 ಸಜಾ ಬಂಧಿಗಳನ್ನು ಸನ್ನಡತೆ ಮತ್ತಿತರ ಕಾರಣಗಳಿಂದ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆ.15 ರಂದು ಈ ಸಜಾ ಬಂಧಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಧಾರವಾಡದಲ್ಲಿರುವ ಕಾರಾಗೃಹಗಳಿಂದ ಈ ಸಜಾ ಬಂಧಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.