ದಸರಾ ಮೆರವಣಿಗೆಗೆ ಗರ್ಭಿಣಿ ನೇತ್ರಾವತಿ ಕರೆತಂದಿದ್ದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಮಲೆನಾಡು ಕೇಸರಿ ಪಡೆ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು. ಎಸ್.ಜಿ.ಚಂದ್ರಶೇಖರ್, ಸದಸ್ಯರಾದ ಎಂ.ವಿಜಯ್, ಎಸ್.ಎನ್.ಚೇತನ್ ಇದ್ದರು. 
ನ್ಯೂಸ್

ಗರ್ಭಿಣಿ ಆನೆ ಕರೆತಂದವರ ಮೇಲೆ ಕ್ರಮಕೈಗೊಳ್ಳಿ: ಕೇಸರಿ ಪಡೆ ಆಗ್ರಹ

ಶಿವಮೊಗ್ಗ: ಗರ್ಭಿಣಿ ನೇತ್ರಾವತಿ ಆನೆ ಕರೆತಂದಿದ್ದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಡಿಸಿಎಫ್‌ಗೆ ಮಲೆನಾಡು ಕೇಸರಿ ಪಡೆ ಕಾರ್ಯಕರ್ತರು ಮನವಿ ಸಲ್ಲಿಸಿದರು.

ದಸರಾ ಹಬ್ಬದ ಸಾರ್ವಜನಿಕ ಮೆರವಣಿಗೆಗೆಂದು ಸಕ್ರೆಬೈಲು ಆನೆಬಿಡಾರದಿಂದ ಒಂದು ಗಂಡು, ಎರಡು ಹೆಣ್ಣು ಆನೆಗಳನ್ನು ತರಿಸಿದ್ದು ಅದರಲ್ಲಿ ನೇತ್ರಾವತಿ ಆನೆ ಮರಿಗೆ ಜನ್ಮ ನೀಡಿದೆ. ಗರ್ಭಧರಿಸಿದ ಆನೆಯನ್ನು ಸಾರ್ವಜನಿಕ ಮೆರವಣಿಗೆಗೆ ರವಾನಿಸುವುದು ವನ್ಯಜೀವಿ ಕಾಯ್ದೆ ಪ್ರಕಾರ ಅಪರಾಧ. ಹಾಗಾಗಿ ಮೆರವಣಿಗೆಗೆ ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.
ಗರ್ಭ ಧರಿಸಿದ ಬಳಿಕ ಆನೆಯ ದೇಹದಲ್ಲಾಗುವ ಬದಲಾವಣೆ ಗುರುತಿಸಬೇಕಿತ್ತು. ಆ ನಿಗಾ ವಹಿಸುತ್ತಿರುವ ಪಶು ವೈದ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದೆ. ಆನೆಗಳಲ್ಲಿ ಗರ್ಭಾವಸ್ಥೆಯ ಅವಧಿ 20ರಿಂದ 23 ತಿಂಗಳು ಇದ್ದು ಈ ಹೆಣ್ಣು ಆನೆ ಗರ್ಭ ಧರಿಸಿರುವ ಬಗ್ಗೆ ಕೆಲವು ಲಕ್ಷಣಗಳ ಬಗ್ಗೆ ಮಾವುತ, ಜಮೇದಾರ್, ಆರ್‌ಎ್ಒ, ಪಶು ವೈದಾಧಿಕಾರಿಗಳು ಪತ್ತೆ ಮಾಡಬಹುದು. ಅನೇಕ ಲಕ್ಷಣಗಳನ್ನು ಗಮನಿಸುವುದರಲ್ಲಿ ಸಿಬ್ಬಂದಿ ವಿಲರಾಗಿದ್ದಾರೆ ಎಂದು ದೂರಿದರು.
ಆನೆಗಳ ಚಲನವಲನದ ಬಗ್ಗೆ ಕರ್ತವ್ಯಲೋಪ ಎದ್ದು ಕಾಣುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಳುಹಿಸುವ ಮೊದಲು ಎಲ್ಲ ಹೆಣ್ಣು ಆನೆಗಳಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿ, ದೈಹಿಕ ಪರೀಕ್ಷೆ ನಡೆಸಿ ಸದೃಢತೆಯ ಸರ್ಟಿಫಿಕೇಟ್ ದಾಖಲುಪಡಿಸಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರವಾಗಿ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ 15 ದಿನಗಳಿಗೊಮ್ಮೆ ಹೆಲ್ತ್ ರಿಜಿಸ್ಟರ್‌ನಲ್ಲಿ ವರದಿ ದಾಖಲಿಸಬೇಕಿರುತ್ತದೆ. ಇಷ್ಟೆಲ್ಲ ನಿಯಮಗಳಿದ್ದರೂ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ತಾಲೀಮಿನ ನೆಪದಲ್ಲಿ ಕಾದಿರುವ ಡಾಂಬರ್ ರಸ್ತೆಯ ಮೇಲೆ ನಡೆಸಿರುತ್ತಾರೆ. ಪಟಾಕಿ ಹಚ್ಚಿದ್ದಾರೆ. ಲಾರಿಯಲ್ಲಿ ಬಲವಂತವಾಗಿ ಕರೆದುಕೊಂಡು ಬರುವುದು ಹೋಗುವುದು ಅಮಾನವೀಯವಾಗಿರುತ್ತದೆ. ಹಾಗಾಗಿ ಕೂಡಲೇ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕೇಸರಿ ಪಡೆ ಅಧ್ಯಕ್ಷ ಎಸ್.ಜಿ.ಚಂದ್ರಶೇಖರ್, ಸದಸ್ಯರಾದ ಎಂ.ವಿಜಯ್, ಎಸ್.ಎನ್.ಚೇತನ್ ಇತರರಿದ್ದರು.