ಗೋಪಾಲಕೃಷ್ಣ ಬೇಳೂರು 
ನ್ಯೂಸ್

ಹಲ್ಲೆಗೈದ ಉಪನ್ಯಾಸಕನ ವಿರುದ್ಧ ಕ್ರಮ

ಶಿವಕುಮಾರ ಎಸ್.ಪಿ.

ಸಾಗರ: ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ ಮತ್ತು ಪಾಲಕರು ಹಲ್ಲೆ ಮಾಡಿರುವುದು ಖಂಡನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿ ಮತ್ತು ಆತನ ತಂದೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜು ಅವರ ಮೇಲೆ ಹಲ್ಲೆ ಮಾಡುವ ಮೂಲಕ ಗುರು-ಶಿಷ್ಯರ ನಡುವಿನ ಅಮೂಲ್ಯ ಸ್ಥಾನಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದರು.

ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ವಿದ್ಯಾರ್ಥಿ ತಂದೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿದ್ಯಾರ್ಥಿ ತಂದೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈ ಪ್ರಕರಣ ಕುರಿತು ಸಚಿವರ ಗಮನಕ್ಕೆ ತಂದು ಉಪನ್ಯಾಸಕರ ಅನುಚಿತ ವರ್ತನೆ ಕುರಿತು ಮಾಹಿತಿ ನೀಡಿ ಅಮಾನತು ಮಾಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ಪಾಲಕರು ಶಾಲಾ ಕಾಲೇಜುಗಳಲ್ಲಿ ಸಂಯಮದಿಂದ ವರ್ತಿಸಬೇಕು. ಹಲ್ಲೆ, ಅಶ್ಲೀಲ ಪದ ಬಳಕೆ ನಮ್ಮ ಸಂಸ್ಕೃತಿಯಲ್ಲ. ಶಾಲಾ ಕಾಲೇಜಿನ ಮುಖ್ಯಸ್ಥರ ಬಳಿ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದ್ದಾರೆ.