ಶಿವಮೊಗ್ಗ: ಆ್ಯಕ್ಟಿಂಗ್ ಸ್ಕೂಲ್ ಆಫ್ ಕರ್ನಾಟಕ(ಎಎಸ್‌ಕೆ) ಚಲುವರಂಗ ಅಭಿನಯ ಶಾಲೆಯನ್ನು ಶಿವಮೊಗ್ಗದ ಲಕ್ಷ್ಮೀ ಗ್ಯಾಲಕ್ಸಿಯಲ್ಲಿ ಜೂ.16ರಿಂದ ಜುಲೈ 21ರವರೆಗೆ ನಡೆಸುತ್ತಿದ್ದು ಸಿನಿಮಾ, ಧಾರಾವಾಹಿ, ನಾಟಕಗಳಲ್ಲಿ ಅಭಿನಯಿಸುವ ಆಸಕ್ತಿ ಇದ್ದವರು ಪಾಲ್ಗೊಳ್ಳಬಹುದು ಎಂದು ಶಾಲೆ ಅಧ್ಯಕ್ಷ, ರಂಗನಿರ್ದೇಶಕ ಅಜಯ್‌ಕುಮಾರ್ ನೀನಾಸಂ ಹೇಳಿದರು.
5ರಿಂದ 10 ವರ್ಷ ಸಬ್ ಜೂನಿಯರ್, 11ರಿಂದ 15 ವರ್ಷ ಜೂನಿಯರ್ ಮತ್ತು 17 ವರ್ಷ ಮೇಲ್ಪಟ್ಟವರ ಸೀನಿಯರ್ ವಿಭಾಗದಲ್ಲಿ ರೆಗ್ಯುಲರ್, ವಾರಾಂತ್ಯ ಮತ್ತು ಪರ್ಸನಲ್ ಟ್ರೈನಿಂಗ್ ತರಗತಿಗಳನ್ನು ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ.16ರ ಬೆಳಗ್ಗೆ 10.30ಕ್ಕೆ ನಟ ಶಿವಮೊಗ್ಗ ರಘು 35 ದಿನಗಳ ಕಲಿಕಾ ತರಬೇತಿ ಶಿಬಿರ ಉದ್ಘಾಟಿಸುವರು. ನಾಟ್ಯಶಾಸ್ತ್ರ, ರಸಭಾವಗಳು, ನಟನೆ ಮಾಡುವುದು, ಸಂದರ್ಶನಕ್ಕೆ ತಯಾರಾಗುವುದು ಹೇಗೆ ಎಂಬುದನ್ನು ಕಲಿಸಿಕೊಡಲಾಗುವುದು ಎಂದರು.
ಡಾ. ಸಾಸ್ವೇಹಳ್ಳಿ ಸತೀಶ್, ಹೊಂಗಿರಣ ಚಂದ್ರು, ಮಂಜು ಕೊಡಗು, ತಿರುಣಾವುಕ್ಕರಸು, ಡಾ. ಕೆ.ವೆಂಕಟೇಶ್ವರ್, ಹನುಮಂತ ಸೇರಿ ನುರಿತ ಶಿಕ್ಷಕರು ಪಾಲ್ಗೊಳ್ಳುವರು. ಬಡ ಮತ್ತು ಮಧ್ಯಮ ವರ್ಗದ ಕಲಾವಿದರಲ್ಲಿ ಗಮನದಲ್ಲಿಟ್ಟುಕೊಂಡು ಶಿವಮೊಗ್ಗದಲ್ಲಿ ತರಬೇತಿ ಶಾಲೆ ಆರಂಭಿಸಲಾಗುತ್ತಿದೆ ಎಂದರು. ಪ್ರಜ್ವಲ್, ಯೋಗೇಶ್, ಅರವಿಂದ್, ಸಂದೀಪ್ ಮತ್ತು ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.