ಕೇರಳ: 15 ವರ್ಷ ಸೀರಿಯಲ್ನಲ್ಲಿ ದುಡಿದ ಮಲಯಾಳಂ ನಟಿ ಕವಿತಾ ಲಕ್ಷ್ಮಿ, ಇದೀಗ ಬೆಳ್ಳಿತರೆ ಹಾಗೂ ಕಿರುತೆರೆಗೆ ಗುಡ್ಬೈ ಹೇಳಿ ತಮ್ಮದೇ ಸ್ವಂತ ಕಿರು ಹೋಟೆಲ್ ನಡೆಸುತ್ತ, ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಸ್ವತಃ ನಟಿಯೇ ತಮ್ಮ ಕಷ್ಟದ ದಿನಗಳ ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಕೂಡಿಡುವ ಗುರಿಯನ್ನು ಹೊಂದಿರುವ ಕವಿತಾ, ಆರಂಭದಲ್ಲಿ ನಟನಾ ವೃತ್ತಿಗೆ ವಿದಾಯ ಹೇಳಿ ಮಗನ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಫುಡ್ಕಾರ್ಟ್ ಪ್ರಾರಂಭಿಸಿದ್ದರು. ಆದರೀಗ, ಮಗಳ ವಿದ್ಯಾಭ್ಯಾಸಕ್ಕಾಗಿ ಡೆಲಿವರಿ ಗರ್ಲ್ ಆಗಿಯೂ ಕೆಲಸ ಮಾಡುತ್ತಿರುವುದು ನಿಜಕ್ಕೂ ಮನಕಲಕುತ್ತದೆ.
ಡೆಲಿವರಿ ಗರ್ಲ್ ಆಗಿ ಲಕ್ಷ್ಮಿ, ವಾರಕ್ಕೆ 14,000 ರೂ. ಸಂಪಾದನೆ ನೋಡುತ್ತಾರಂತೆ. ಸಾಲ ಮತ್ತು ಮಗಳ ಖರ್ಚುಗಳನ್ನು ಇದರಿಂದ ಬಂದ ಹಣದಿಂದಲೇ ಪಾವತಿ ಮಾಡುವುದಾಗಿ ಹೇಳಿಕೊಂಡಿದ್ದಾರೆ. 'ಈ ನಡುವೆ, ನಾನು ಒಂದಷ್ಟು ಚಿತ್ರಗಳನಷ್ಟೇ ಮಾಡಿದ್ದೇನೆ. 15 ವರ್ಷಗಳ ಕಾಲ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಸೀರಿಯಲ್ನಲ್ಲಿ ಅವರು ಕೊಡುತ್ತಿದ್ದ ಸಂಬಳ ಕೇವಲ 3000ರಿಂದ 3500 ರೂ. ಮಾತ್ರ. ಅದರಲ್ಲೂ, ಆಯಾ ಧಾರಾವಾಹಿಗಳಿಗೆ ನನ್ನದೇ ಆದ ಡ್ರೆಸ್ ಮತ್ತು ಚಪ್ಪಲಿಗಳನ್ನು ಖರೀದಿಸಬೇಕಿತ್ತು. ಅದು ನನಗೆ ಬರುತ್ತಿದ್ದ ಸಂಬಳದಲ್ಲಿ ಸಾಲುತ್ತಿರಲಿಲ್ಲ ಎಂದಿದ್ದಾರೆ ಲಕ್ಷ್ಮಿ,(ಏಜೆನ್ಸೀಸ್).