ಚಿಕ್ಕಮಗಳೂರು: ಯಾವುದೇ ಇಲಾಖೆ ಅಧಿಕಾರಿಗಳು ವೃತ್ತಿ ಗೌರವಕ್ಕೆ ಧಕ್ಕೆಯುಂಟಾಗದಂತೆ ಸಾರ್ವಜನಿಕರ ಸೇವೆ ಮಾಡಬೇಕು. ಬಡವರ ಸೇವೆ ಮಾಡಿದಾಗ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಇಲಾಖೆ ಸೌಲಭ್ಯಗಳ ಆದೇಶ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಇಲಾಖೆಗಳ ಪೈಕಿ ಕಂದಾಯ ಇಲಾಖೆಗೆ ಸಾರ್ವಜನಿಕರು ಹೆಚ್ಚಾಗಿ ಆಗಮಿಸುತ್ತಾರೆ, ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಸಮಸ್ಯೆಗೆ ಸ್ಪಂದಿಸಿದಾಗ ಇಲಾಖೆ ಅಧಿಕಾರಿಗಳ ಮೇಲೆ ನಂಬಿಕೆ ಬರುತ್ತದೆ ಎಂದರು.
ಪಿಂಚಣಿಗಾಗಿ ಅರ್ಹರರು ತಾಲೂಕು ಕಚೇರಿಗೆ ಬಂದಾಗ ಸುಲಭದ ರೀತಿ ಪಿಂಚಣಿ ಬರುವ ಹಾಗೆ ಇಲಾಖೆ ಅಧಿಕಾರಿಗಳು ಮಾಡಿಕೊಡಬೇಕು. ಉಳ್ಳವರು ಸಾಕಷ್ಟು ಮಂದಿ ಪಿಂಚಣಿಗೆ ತಾಲೂಕು ಕಚೇರಿಗೆ ಬರುವುದಿಲ್ಲ. ಕಷ್ಟದಲ್ಲಿರುವವರು ವಿಧಾವ ವೇತನ, ಹಿರಿಯ ನಾಕರಿಕರು ಹೆಚ್ಚಾಗಿ ಬರುತ್ತಾರೆ. ಬಡವರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗಬೇಕು. ಒಂದು ವೇಳೆ ಮುಂದಾಗದಿದ್ದರೆ ಬಡವರ ಸವಲತ್ತುಗಳು ಉಳ್ಳವರ ಪಲಾಗುತ್ತದೆ ಎಂದು ಎಚ್ಚರಿಸಿದರು.
ದಾಖಲೆಗಳಲ್ಲಿ ನ್ಯೂನತೆಗಳು ಇರಬಹುದು. ದೈಹಿಕವಾಗಿ ವಯಸ್ಸಾಗಿರುತ್ತದೆ. ಅಂತಹವರಿಗೆ ಮಾನವೀಯತೆ ದೃಷ್ಟಿಯಲ್ಲಿ ಸೌಲಭ್ಯ ಕಲ್ಪಿಸಬೇಕು. ಸಾಕಷ್ಟು ಮಂದಿ ಮಹಿಳೆಯರ ಆಧಾರ ಕಾರ್ಡ್‌ಗಳಲ್ಲಿ ವಯಸ್ಸಿನ ವ್ಯತ್ಯಾಸಗಳು ಇವೆ. ಆಧಾರ್ ನೋಂದಣಿ ವೇಳೆ ತಪ್ಪುಗಳು ನಡೆದಿದ್ದು ಕೂಡಲೇ ಸರಿಪಡಿಸಿಕೊಂಡು ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ಆಗ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
60 ವರ್ಷ ಮಲ್ಪಟ್ಟವರಿಗೆ ವೃದ್ಧಾಪ್ಯ ವೇತನ 600 ರೂ, 65 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾಸುರಕ್ಷ 1200, ಅಂಗವಿಕಲರಿಗೆ 1400 ಪಿಂಚಣಿ, 70ಶೇ ಅಂಗವೈಕಲ್ಯವಿದ್ದರೆ 1700, ವಿಧವೆಯರಿಗೆ 1200 ಪಿಂಚಣಿ ಎಂದು ತಹಸೀಲ್ದಾರ್ ಸುಮಂತ್ ಹೇಳಿದರು. ಕಳೆದ ಎರಡು ದಿನಗಳಿಂದ 100 ಮಂದಿ ಫಲಾನುಭವಿಗಳ್ನು ಆಯ್ಕೆ ಮಾಡಲಾಗಿದ್ದು, ಆದೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. ಒಂದು ವೇಳೆ ಮಧ್ಯದಲ್ಲಿ ಪಿಂಚಣಿ ಸೌಲಭ್ಯ ನಿಂತರೆ ಕೂಡಲೇ ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಯನ್ನು ಭೇಟಿ ನೀಡಿ ಕೇಳಿದ ದಾಖಲೆಗಳನ್ನು ಒದಗಿಸಬೇಕು. ಆಗ ನಿಂತಿರುವ ಪಿಂಚಣಿ ಮುಂದುವರಿಯಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ತಾರನಾಥ್ ಹಾಜರಿದ್ದರು.