ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ  
ನ್ಯೂಸ್

ವಂಚನೆ ಹಣದಲ್ಲಿ ಆಸ್ತಿ ಸಂಪಾದನೆ!

ಬೆಂಗಳೂರು: ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ 62.77 ಕೋಟಿ ರೂ. ಚಿನ್ನ ಸಾಲದ ಹಗರಣದಲ್ಲಿ ಬಂಧಿತ ಆರ್.ಎಂ. ಮಂಜುನಾಥಗೌಡ, ವಂಚನೆ ಹಣದಲ್ಲಿ ಸ್ಥಿರ ಮತ್ತು ಚರಾಸ್ತಿ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ), ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡನನ್ನು ಬಂಧಿಸಿ 14 ದಿನ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ನಗರ ಶಾಖೆಯಲ್ಲಿ ದೊಡ್ಡ ಪ್ರಮಾಣದ ಹಣ ದುರುಪಯೋಗ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಜುನಾಥ ಗೌಡ ಸೂಚನೆ ಮೇರೆಗೆ ಶಾಖೆಯ ವ್ಯವಸ್ಥಾಪಕಿಯಾಗಿ ಬಿ. ಶೋಭಾ ನಿಯೋಜನೆ ಆಗಿತ್ತು.

ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, ಶೋಭಾ ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸಿ ಬ್ಯಾಂಕ್‌ನ 62.77 ಕೋಟಿ ರೂ.ಗಳನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ವೈಯಕ್ತಿಕ ಖಾತೆದಾರರ ಗಮನಕ್ಕೆ ಬಾರದೆ ಚಿನ್ನದ ಸಾಲ ಖಾತೆಗಳನ್ನು ತೆರೆಯುವುದು, ನಕಲಿ ದಾಖಲೆಗಳನ್ನು ಬಳಸುವುದು ಬೆಳಕಿಗೆ ಬಂದಿದೆ.

ಆನಂತರ ಮಂಜುನಾಥ್‌ಗೌಡಗೆ ಹಣವನ್ನು ಹಸ್ತಾಂತರಿಸಲಾಗಿದೆ. ಆ ಹಣದಲ್ಲಿ ವಿವಿಧೆಡೆ ಚರ ಮತ್ತು ಸ್ಥಿರಾಸ್ತಿಗಳನ್ನು ಸಂಪಾದನೆ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಅಕ್ರಮ ಹಣಕಾಸು ವಹಿವಾಟು ಆರೋಪದ ಮೇಲೆ ಬಂಧಿಸಿದ್ದು, ಶಿವಮೊಗ್ಗ ಡಿಸಿಸಿ ಬ್ಯಾಂಕ್, ನಗರ ಶಾಖೆಯ ಕಚೇರಿ ಸೇರಿದಂತೆ ಶಿವಮೊಗ್ಗ ಮತ್ತು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿ ಡಿಜಿಟಲ್ ಸಾಕ್ಷ್ಯ ಸೇರಿ ವಿವಿಧ ಪುರಾವೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.