ಬೆಂಗಳೂರು: ಸಿಗರೇಟ್ ಸಗಟು ವ್ಯಾಪಾರಿಗಳಿಂದ ಲಕ್ಷಾಂತರ ರೂ. ಲಂಚ ಪಡೆದ ಪ್ರಕರಣದ ಸಂಬಂಧ ಅಮಾನತು ಗೊಂಡಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿ ಶನಿವಾರ ಮತ್ತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿಚಾರಣೆ ಎದುರಿಸಿದ್ದಾರೆ.
ಮಧ್ಯಾಹ್ನ 12.30 ಗಂಟೆಗೆ ಎಸಿಬಿ ಕಚೇರಿಗೆ ಹಾಜರಾದ ಎಸಿಪಿ ಅವರನ್ನು ತನಿಖಾಧಿಕಾರಿ ಗಳು ಸಂಜೆವರೆಗೆ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಾಹಿತಿ ಕಲೆ ಹಾಕಿರುವ ಎಸಿಬಿ ಅಧಿಕಾರಿಗಳು, ಬೇನಾಮಿ ಆಸ್ತಿಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಚಾರಣೆಗೆ ಎಸಿಪಿ ಸೂಕ್ತ ರೀತಿಯಲ್ಲಿ ಸ್ಪಂದಿಸಿ ದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ
ಇನ್ ಸ್ಪೆಕ್ಟರ್ ನಿರಂಜನ್ ಕುಮಾರ್ ಶುಕ್ರವಾರ ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದು, ಮತ್ತೋರ್ವ ಇನ್ಸ್ಪೆಕ್ಟರ್ ಅಜಯ್ ಇನ್ನೂ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎಸಿಪಿ ಹಾಗೂ ಇಬ್ಬರು ಇನ್ಸ್ಪೆಕ್ಟರ್ಗಳಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ತಮ್ಮನ್ನು ಬಂಧಿಸುವುದಿಲ್ಲ ಎಂಬುದು ದೃಢಪಟ್ಟ ನಂತರ ಒಬ್ಬೊಬ್ಬರಾಗಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ತನಿಖಾ ಧಿಕಾರಿಗಳ ಮುಂದೆ ಹಾಜರಾಗಿದ್ದ ಎಸಿಪಿ ಅನಾರೋಗ್ಯದ ನೆಪವೊಡ್ಡಿ ಹಿಂದಿರುಗಿದ್ದರು.