ವಿಜಯಪುರದ ವೈದ್ಯ ದಂಪತಿ ಡಾ.ಸಿದ್ದಪ್ಪ ಸೊನ್ನದ ಹಾಗೂ ಡಾ.ಮೀನಾಕ್ಷಿ ಸೊನ್ನದ ನಿಖಿಲ್‌ಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.  
ನ್ಯೂಸ್

ವಿಜಯಪುರದ ವೈದ್ಯ ದಂಪತಿ ಪುತ್ರನ ಸಾಧನೆ, ನೀಟ್‌ನಲ್ಲಿ ‘ನಿಖಿಲ್’ ರಾಜ್ಯಕ್ಕೆ ಪ್ರಥಮ

ವಿಜಯಪುರ: ರಾಷ್ಟ್ರೀಯ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ವಿಜಯಪುರದ ವೈದ್ಯ ದಂಪತಿಯ ಪುತ್ರ ರಾಜ್ಯಕ್ಕೆ ಪ್ರಥಮ ಹಾಗೂ ರಾಷ್ಟ್ರಕ್ಕೆ 17ನೇ ರ‌್ಯಾಂಕ್ ಪಡೆದು ಸಾಧನೆ ಮೆರೆದಿದ್ದಾನೆ.

ವಿಜಯಪುರದ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ದಂಪತಿ ಡಾ.ಸಿದ್ದಪ್ಪ ಸೊನ್ನದ ಮತ್ತು ಡಾ.ಮೀನಾಕ್ಷಿ ಸೊನ್ನದ ಅವರ ಪುತ್ರ ನಿಖಿಲ ಸಾಧನೆ ಮೆರೆದ ವಿದ್ಯಾರ್ಥಿ. ಇತ್ತೀಚೆಗೆ ನಡೆದ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ರ‌್ಯಾಂಕ್ ಬಂದಿದ್ದು ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಾಚರಿಸಿದರು.

ಮಂಗಳೂರು ವಳಚಿಲ್‌ನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ನಿಖಿಲ್ ಸೊನ್ನದ ಅವರು 720 ಅಂಕಗಳಿಗೆ 670 ಅಂಕ ಗಳಿಸಿದ್ದಾರೆ. ವಿಜಯಪುರ ಸೈನಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ನಿಖಿಲ್ ಪಿಯುಸಿ ವ್ಯಾಸಂಗಕ್ಕಾಗಿ ಮಂಗಳೂರಿನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು.

ಗುಣಮಟ್ಟದ ಶಿಕ್ಷಣ, ನುರಿತ ಉಪನ್ಯಾಸಕರು, ಕಠಿಣ ಪರಿಶ್ರಮ, ಕುಟುಂಬಸ್ಥರ ಸಹಕಾರವೇ ರ‌್ಯಾಂಕ್ ಹಿಂದಿರುವ ಪ್ರೇರಣೆ ಎಂದು ನಿಖಿಲ್ ಅಭಿಪ್ರಾಯ ಹಂಚಿಕೊಂಡರು.

ಏಕಾಗ್ರತೆಯಿಂದ ಪಾಠ ಕೇಳುವುದರ ಜೊತೆಗೆ ಕ್ಲಾಸ್ ಮಧ್ಯೆ ಸಿಕ್ಕ 3-4 ಗಂಟೆ ಬಿಡುವಿನ ವೇಳೆಯಲ್ಲಿ ಪುನರ್ ಮನನ ಮಾಡಿದ್ದಲ್ಲದೇ ರಾತ್ರಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದರಿಂದ ಸಾಕಷ್ಟು ವಿಷಯ ಮನನವಾಗುತ್ತಿತ್ತು. ಒತ್ತಡ ಸಹಜವಾಗಿದ್ದು, ಕ್ರೀಡೆ, ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಾಧನೆಯ ಹಾದಿ ಕಠಿಣವೆನ್ನಿಸಲಿಲ್ಲವೆನ್ನುತ್ತಾರೆ ನಿಖಿಲ್.

ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುವುದು, ಚೆಸ್ ಆಡುವುದು, ಕವಿತೆ ಬರೆಯುವುದು..ಹೀಗೆ ಹಲವು ಹವ್ಯಾಸಗಳು ಓದಿನ ಒತ್ತಡ ಕಡಿಮೆ ಮಾಡಿದವಲ್ಲದೇ ಓದುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು. ಮನೆಯಲ್ಲಿ ವೈದ್ಯರಾಗಿರುವ ತಂದೆ ಮತ್ತು ತಾಯಿಯ ಪ್ರೋತ್ಸಾಹ ಕೂಡ ಸಾಕಷ್ಟು ನೆರವಾಯಿತು. ಮುಂದೆ ತಂದೆ-ತಾಯಿಯಂತೆ ವೈದ್ಯನಾಗುವ ಕನಸು ಕಟ್ಟಿಕೊಂಡಿದ್ದಾಗಿ ನಿಖಿಲ್ ‘ವಿಜಯವಾಣಿ’ ಜೊತೆ ಮನಬಿಚ್ಚಿ ಮಾತನಾಡಿದರು.