ನ್ಯೂಸ್

ಗುರಿಯನ್ನಿಟ್ಟು ಮುನ್ನಡೆದರೆ ಸಾಧನೆ ಸಾಧ್ಯ

ಬೇಲೂರು: ಕಠಿಣ ಪರಿಶ್ರಮ ಹಾಗೂ ಗುರುಗಳ ಮಾರ್ಗದರ್ಶನದೊಂದಿಗೆ ಗುರಿಯನ್ನಿಟ್ಟು ಮುನ್ನಡೆದರೆ ಮಾತ್ರ ಸಾಧನೆ ಸಾಧ್ಯ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಹೇಳಿದರು.

ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭಾನುವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕಸಾಪ ಹಾಗೂ ದೇಶಭಕ್ತರ ಬಳಗದ ಐದನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳ ಹಿಂದೆ ಕಾಸರಗೋಡಿನಿಂದ ಬೇಲೂರಿಗೆ ಬಂದು ವೈದ್ಯಕೀಯ ಸೇವೆ ಸಲ್ಲಿಸುತ್ತಲೇ ಲಯನ್ಸ್ ಸಂಸ್ಥೆ ಸದಸ್ಯರು, ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಜತೆಗೆ ದೇಶಭಕ್ತರ ಬಳಗದ ಸಂಸ್ಥಾಪಕ ಅಧ್ಯಕ್ಷರಾಗಿ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕೊಟ್ಟು ಸನ್ಮಾನಿಸಿ ಹೆಸರು ಪಡೆದಿದ್ದಾರೆ. ಅವರ ಸೇವೆ ಪರಿಗಣಿಸಿ ಅಭಿನಂದಿಸುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಡಾ.ಸಂತೋಷ್ ಅವರ ಸೇವೆ ನಿರಂತರವಾಗಿರಲಿ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ಕಲೆ ಸಾಹಿತ್ಯ, ಸಂಗೀತ , ನೃತ್ಯ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಪ್ರತಿಭೆ ಹೊಂದಿರುತ್ತಾರೆ. ಅವರನ್ನು ಸಂಘ ಸಂಸ್ಥೆಗಳು ಗುರುತಿಸುವ ಕೆಲಸ ಮಾಡಬೇಕು. ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಸಂತೋಷ್ ಸಾಧನೆ ಉತ್ತಮವಾಗಿದ್ದು ಸನ್ಮಾನಕ್ಕೆ ಅರ್ಹರಾಗಿದ್ದಾರೆ ಎಂದರು.

ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಬೇಲೂರಿಗೆ ಬಂದ ಸಂದರ್ಭ ಕಷ್ಟದಿಂದಲೇ ಬದುಕು ಕಟ್ಟಿಕೊಂಡೆ. ನಂತರದಲ್ಲಿ ಸಮಾಜ ಸೇವೆಗೆ ಮುಂದಾಗಿದ್ದರಿಂದ ಈ ಮಟ್ಟದಲ್ಲಿ ಗುರುತಿಸಿಕೊಳ್ಳಳು ಸಾಧ್ಯವಾಗಿದೆ. ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಲು ಪತ್ನಿಯ ಸಹಕಾರವಿದೆ. ಅಲ್ಲದೆ ದೇಶಭಕ್ತರ ಬಳಗದಿಂದ ರಾಷ್ಟ್ರ ಪ್ರೇಮಿಗಳು, ಸಾಹಿತಿಗಳು, ಕೃಷಿಕರನ್ನು ಸನ್ಮಾನಿಸುವ ಕೆಲಸ ಮಾಡುತ್ತಿದೆ ಎಂದರು.

ಹಿರಿಯ ಸಾಹಿತಿ ಇಂದಿರಮ್ಮ, ವಕೀಲ ಎಚ್.ಆರ್.ಚಂದ್ರು, ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಂದ್ರಮೌಳಿ, ವಲಯಾಧ್ಯಕ್ಷ ಅಬ್ದುಲ್ ಲತೀಫ್, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ಮಲ್ಲಿಕಾರ್ಜನ್ ಗ್ರೂಪ್‌ನ ರಾಜಶೇಖರ್, ಮಹೇಶ್, ಹಯವದನರಾವ್, ಕಸಾಪದ ಸುಲೈಮಾನ್, ಶಿವಪ್ಪ ಸೇರಿದಂತೆ ಇತರರಿದ್ದರು.

ಬೇಲೂರಿನ ವಿದ್ಯಾ ವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶಭಕ್ತರ ಬಳದಗ ಅಧ್ಯಕ್ಷ ಡಾ.ಸಂತೋಷ್ ದಂಪತಿಯನ್ನು ಸನ್ಮಾನಿಸಲಾಯಿತು. ಇಂದಿರಮ್ಮ, ಎಚ್.ಆರ್.ಚಂದ್ರು, ಡಾ.ಚಂದ್ರಮೌಳಿ, ಅಬ್ದುಲ್ ಲತೀಫ್, ಮ.ಶಿವಮೂರ್ತಿ, ರಾಜಕುಮಾರ್ ಇತರರಿದ್ದರು.