ಕೈಲಾಂಚ : ಅಚ್ಚಲು ಬೆಟ್ಟ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಇಂತಹ ಸ್ಥಳ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದಿಂದ ಅಭಿವೃದ್ಧಿ ವಂಚಿತವಾಗಿ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ.
ರಾಮನಗರ ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಬೆಟ್ಟ, ಬೆಂಗಳೂರು-ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಅಚ್ಚಲು ಗ್ರಾಮದಲ್ಲಿದೆ. ಇದು ಕಲ್ಲಿನ ಬೆಟ್ಟವಾಗಿರದೆ ತನ್ನ ಒಡಲಿನಲ್ಲಿ ಇತಿಹಾಸ ಹೊದ್ದು, ಸುಂದರ ವನಸಿರಿ ಮೈಗಂಟಿಸಿಕೊಂಡು ನಿಂತಿದೆ.
ಜಿಲ್ಲಾ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೂ ಒಂದು ದಿನದ ಪ್ರವಾಸ ಸ್ಥಳಕ್ಕೆ ಉತ್ತಮ ಸ್ಥಳವಾಗಿರುವ ಇಂತಹ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆ ಇಲ್ಲಿಯವರೆಗೂ ಅಭಿವೃದ್ಧಿಗೆ ಮುಂದಾಗದಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ನೆಲಮಟ್ಟದಿಂದ ಸುಮಾರು1000 ಅಡಿ ಎತ್ತರವಿರುವ ಬೆಟ್ಟ, ಚಾರಣಕ್ಕೆ ಉತ್ತಮ ಸ್ಥಳವಾಗಿದೆ. ಬೆಟ್ಟದಲ್ಲಿ ರಾಜರು ಆಳ್ವಿಕೆ ವಾಡಿದ್ದರು, ಸೈನಿಕರು, ಜನವಸತಿ ಇತ್ತೆಂಬುದಕ್ಕೆ ಇಂದಿಗೂ ಬೆಟ್ಟದಲ್ಲಿ ಅನೇಕ ಕುರುಹುಗಳು ಕಾಣಸಿಗುತ್ತವೆ. ಕೋಟೆ ಕಲ್ಲಿನ ಕಟ್ಟಡ, ಕಂಬಗಳು, ಅಗಸನ ಕಲ್ಲು, ಪರಿಚಾರಿಕೆ ಮನೆ, ಒರಳಗಲ್ಲು, ಧ್ವಜಸ್ಥಂಭ, ಬೇಸಿಗೆ ಕಾಲದಲ್ಲೂ ತಂಪಾಗಿರುವ ಸಿಹಿ ನೀರಿನ ಕಲ್ಯಾಣಿ, ಬಂಡೆ ಮೇಲೆ ಕೆತ್ತಿರುವ ಆಂಜನೇಯ ವಿಗ್ರಹ, ಹೊನ್ನಾರುತ್ತಮ್ಮ ದೇವಾಲಯ, ಬೆಟ್ಟ ಹತ್ತಲು ಕಟ್ಟಿರುವ ಮೆಟ್ಟಿಲುಗಳನ್ನು ಕಾಣಬಹುದಾಗಿದೆ.
ದಾಖಲೆಗಳಲ್ಲಿ ಅಚ್ಚಲು ದುರ್ಗವೆಂದು ಕರೆಯುವ ಈ ಪ್ರದೇಶ ಹಿಂದೆ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟಿತ್ತು. ಬೇಸಿಗೆಯಲ್ಲಿ ವಿಶ್ರಾಂತಿ ತಾಣವಾಗಿ ವಾಡಿಕೊಂಡು ಅಶ್ವದಳ, ಸೈನಿಕರ ತಾಣವಾಗಿ ವಾಡಿಕೊಂಡು ಇಲ್ಲಿಂದಲೇ ಆಳ್ವಿಕೆ ನಡೆಸುತ್ತಿದ್ದರೆಂದು ಇತಿಹಾಸ ತಿಳಿಸುತ್ತದೆ.
ಪ್ರವಾಸೋದ್ಯಮ ಇಲಾಖೆ ಬೆಟ್ಟವನ್ನು ಅಭಿವೃದ್ಧಿಪಡಿಸಲು ಮುತುವರ್ಜಿ ವಹಿಸಿಲ್ಲ. ಇಂದಿಗೂ ಬೆಟ್ಟಕ್ಕೆ ಉತ್ತಮ
ರಸ್ತೆ ವಾಡಿಲ್ಲ. ಸುಂದರ ಪ್ರಾಕೃತಿಕ ತಾಣದ ಸೊಬಗನ್ನು ಪ್ರವಾಸಿಗರು ಸವಿಯಲು ಅನುಕೂಲವಾಗುವಂತೆ ಬೆಟ್ಟವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಿ ಬೆಟ್ಟಕ್ಕೆ ಹೋಗಲು ಸೂಕ್ತ ರಸ್ತೆ ನಿರ್ಮಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರವಾಸೋದ್ಯಮ ಇಲಾಖೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬೆಟ್ಟದಲ್ಲಿ ಚಾರಣ, ಸ್ವಚ್ಛತೆ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಇಷ್ಟಕ್ಕೆ ಸೀಮಿತವಾಗದೆ ಬೆಟ್ಟವನ್ನು ಪ್ರಮುಖ ಪ್ರವಾಸಿ ತಾಣ ವಾಡಲು ಮುಂದಾಗಬೇಕು. ಬೆಟ್ಟಕ್ಕೆ ಹೋಗಿ ಬರಲು ರಸ್ತೆ ನಿರ್ಮಿಸಬೇಕು. ಪುಟ್ಟಸ್ವಾಮಿ ಸ್ಥಳೀಯ ಅಚ್ಚಲುದೊಡ್ಡಿ. ಪ್ರವಾಸಿ ಸ್ಥಳವಾಗಿರುವ ಅಚ್ಚಲು ಬೆಟ್ಟ ಅಭಿವೃದ್ಧಿ ವಂಚಿತವಾಗಿದೆ. ಪುರಾತನ ಕುರುಹುಗಳು ಸೂಕ್ತ ರಕ್ಷಣೆ ಇಲ್ಲದೆ ಹಾಳಾಗುತ್ತಿವೆ. ಇವುಗಳನ್ನು ಸಂರಕ್ಷಿಸಿ, ಪ್ರವಾಸಿ ತಾಣ ವಾಡುವ ನಿಟ್ಟಿನಲ್ಲಿ ಇಲಾಖೆ ಮುತುವರ್ಜಿ ವಹಿಸಬೇಕು. ಶಿವಲಿಂಗಯ್ಯ ಅವ್ವೇರಹಳ್ಳಿ ನಿವಾಸಿ