ನ್ಯೂಸ್

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿ ಸೆರೆ

ಬೆಂಗಳೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸೋಲದೇವನಹಳ್ಳಿಯ ಗುನಿಅಗ್ರಹಾರ ನಿವಾಸಿ ರಾಘವೇಂದ್ರ(೩೪) ಬಂಧಿತ. ಆರೋಪಿಯಿಂದ ೧೯ ಕೆ.ಜಿ.ತೂಕದ ೩೧ ದೊಡ್ಡ ಸಿಲಿಂಡರ್‌ಗಳು ಹಾಗೂ ೧೪.೨ ಕೆ.ಜಿ. ತೂಕದ ೧೧೦ ಗ್ಯಾಸ್ ಸಿಲಿಂಡರ್‌ಗಳು, ರೀಫಿಲ್ಲಿಂಗ್ ರಾಡ್‌ಗಳು ಮತ್ತು ೨ ಗೂಡ್ಸ್ ಕ್ಯಾಂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಲದೇವನಹಳ್ಳಿಯ ಗುನಿ ಅಗ್ರಹಾರದಲ್ಲಿ ಗೃಹ ಬಳಕೆ ಸಿಲಿಂಡರ್ ಏಜೆನ್ಸಿ ಹಾಗೂ ಉಗ್ರಾಣದಲ್ಲಿ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಫೆ.೯ರಂದು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿ ರಾಘವೇಂದ್ರ, ರಾಡ್‌ಗಳ ಮೂಲಕ ಅಧಿಕೃತ ಕಂಪನಿಯ ಸಿಲಿಂಡರ್‌ಗಳಿಂದ ಬೇರೆ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ಹಾಗೂ ಅಧಿಕೃತ ಕಂಪನಿಗಳ ಲೇಬಲ್ ಅಂಟಿಸಿ, ಕಂಪನಿಯ ಸಿಲಿಂಡರ್‌ಗಳೆಂದು ಸಾರ್ವಜನಿಕರಿಗೆ ನಂಬಿಸಿ, ಸರಬರಾಜು ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಆರೋಪಿ ಗ್ಯಾಸ್ ಏಜೆನ್ಸಿ ನಡೆಸಲು ಪರವಾನಿಗೆ ಇದ್ದರೂ ಅದನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.