ನ್ಯೂಸ್

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸೆರೆ

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಆರೋಪಿಯೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಯನಗರದ ರಾರಾಜೇಶ್ವರಿ ಸ್ಲಂ ನಿವಾಸಿ ಆರೋಪಿ ಶರವಣ (22) ಬಂಧಿತ.
ಬುಧವಾರ ಬಾಲಕಿಯ ಪಾಲಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಶರವಣನನ್ನು ಬಂಧಿಸಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಎದುರುಗಡೆ ಮನೆಯಲ್ಲಿ ಆರೋಪಿಯು ವಾಸವಿದ್ದು, ಅವರ ಪಾಲಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿಯು ಮನೆ ಸಮೀಪದ ಅಂಗಡಿಗೆ ಹೋಗಿದ್ದಾಗ ಆಕೆಯ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ಕರೆದುಕೊಂಡು ಹೋಗಿ ಕಿರಿದಾದ ರಸ್ತೆಯಲ್ಲಿ ಲೈಂಗಿ ದೌರ್ಜನ್ಯ ಎಸಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸ್ ಸಹಾಯವಾಣಿಗೆ ಮತ್ತು ಬಾಲಕಿಯ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಬಾಲಕಿಯ ಸಂಬಂಧಿಗಳು ಆರೋಪಿಯ ಮನೆ ಬಳಿ ಹೋದಾಗ ಅವರ ಕುಟುಂಬಸ್ಥರು ಜಗಳ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕುಟುಂಬಸ್ಥರ ಪ್ರತಿಭಟನೆ:
ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ನಾವು ಜೀವನೋಪಯಕ್ಕಾಗಿ ಬೆಳಗ್ಗೆ ಕೆಲಸಕ್ಕೆ ಹೋಗಿ, ಸಂಜೆ ಬರುತ್ತೇವೆ. ನಮ್ಮ ಚಿಕ್ಕ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತೇವೆ. ಮಕ್ಕಳು ಮನೆ ಬಳಿ ಆಟವಾಡಿಕೊಂಡು ಇರುತ್ತವೆ. ಏನು ಅರಿಯದ ಕಂದಮ್ಮಗಳ ಮೇಲೆ ಇಂತಹ ಘಟನೆಗಳು ನಡೆದರೆ ಯಾರು ಹೊಣೆ ಎಂದು ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.