ನ್ಯೂಸ್

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮಹಿಳೆ ಸೇರಿ ಇಬ್ಬರ ಬಂಧನ

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೇ ಅವಾಚ್ಯಪದಗಳಿಂದ ನಿಂದಿಸಿದ ಆರೋಪದ ಮೇಲೆ ಮಹಿಳೆ ಸೇರಿ ಇಬ್ಬರನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಸಂಚಾರ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿ.ಜಿ ನಿರ್ಮಲ ನೀಡಿದ್ದ ದೂರಿನನ್ವಯ ಮೊಹಮ್ಮದ್ ಸರ್ಬಾಸ್ ಮತ್ತು ಹಿರಲ್ ವ್ಯಾಸ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಮಲ ಅವರು, ಆ.೧೪ ಬೆಳಗ್ಗೆ ತಮ್ಮ ಸಿಬ್ಬಂದಿಯೊಂದಿಗೆ ಯಲಹಂಕ ಉಪನಗರದ ಶೇಷಾದ್ರಿಪುರ ಕಾಲೇಜಿನ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ೧೨.೩೦ ಕ್ಕೆ ಬುಲೆಟ್ ವಾಹನವು ನೋಪಾರ್ಕಿಂಗ್ ನಿಲ್ಲಿಸಲಾಗಿತ್ತು. ಹೀಗಾಗಿ ಅದಕ್ಕೆ ಪೊಲೀಸರು ವ್ಹೀಲ್ ಕ್ಲಾಂಪ್ ಹಾಕಿದ್ದರು. ನಂತರ ಅಲ್ಲಿಗೆ ಬಂದ ವಾಹನದ ಮಾಲೀಕ ಮೊಹಮ್ಮದ್ ಸರ್ಬಾಸ್‌ಗೆ ನೋ ಪಾರ್ಕಿಂಗ್ ದಂಡವನ್ನು ಕಟ್ಟುವಂತೆ ಪೊಲೀಸರು ತಿಳಿಸಿದರು. ಆತ ಏರುಧ್ವನಿಯಲ್ಲಿ ಮಾತನಾಡಿದ್ದ. ದಂಡ ಕಟ್ಟುವುದಿಲ್ಲ. ದಂಡ ಕಟ್ಟಲು ಹಣವಿಲ್ಲ. ನೋ ಪಾರ್ಕಿಂಗ್ ಬೋರ್ಡು ಹಾಕಿದ್ದೀರಾ? ನಾನು ಬೈಕ್ ನಿಲ್ಲಿಸುವಾಗ ನೀವು ವಿಜಲ್ ಹಾಕಿ ಓಡಿಸಬೇಕಿತ್ತು ಎಂದು ವಾಗ್ವಾದ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ. ನಂತರ ಮಹಿಳೆಯೊಬ್ಬರಿಗೆ ಕರೆ ಮಾಡಿ ಸ್ಥಳಕ್ಕೆ ಕರಿಸಿಕೊಂಡಿದ್ದ.

ಓಡಿ ಹೋಗುವಂತೆ ಹೇಳಿದ ಮಹಿಳೆ:

ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಮಹಿಳೆ ಹಿರಲ್ ವ್ಯಾಸ್ ಆಕೆ ತಂದಿದ್ದ ದ್ವಿಚಕ್ರ ವಾಹನವನ್ನು ಮೊಹಮ್ಮದ್ ಸರ್ಬಾನ್‌ಗೆ ಕೊಟ್ಟು ಇಲ್ಲಿಂದ ಓಡಿ ಹೋಗುವಂತೆ ಹೇಳಿದ್ದಾಳೆ. ಆಗ, ಟ್ರಾಫಿಕ್ ಪೊಲೀಸರು ದಂಡವನ್ನು ಪಾವತಿಸಿ ಹೋಗುವಂತೆ ಹೇಳಿದ್ದಾರೆ. ಆದರೆ, ಹಿರಲ್ ವ್ಯಾಸ್ ಕರ್ತವ್ಯದಲ್ಲಿದ್ದ ನಿರ್ಮಲಾ ಮತ್ತು ಸಿಬ್ಬಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ, ಅಸಭ್ಯವಾಗಿ ಕೈ ಸನ್ನೆ ಮಾಡಿ ಅವಮಾನ ಮಾಡಿದ್ದಾರೆ. ಪೊಲೀಸರ ಜತೆ ಕಿರಿಕ್ ತೆಗೆದು, ಅವಾಚ್ಯವಾಗಿ ನಿಂದಿಸಿದ್ದ ಮಹಿಳೆ ಸೇರಿ ಇಬ್ಬರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಮಹಿಳೆ ಹಿರಲ್ ವ್ಯಾಸ್ ಅವರ ಕ್ಲಿನಿಕ್‌ನಲ್ಲಿ ಮೊಹಮ್ಮದ್ ಸರ್ಬಾಸ್

ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.