ಬೆಂಗಳೂರು: ಹಳೇ ದ್ವೇಷಕ್ಕೆ ಸೋದರ ಸಂಬಂಧಿಯನ್ನು ಕೊಲೆಗೈದಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮ್‌ಸಿಂಗ್ ಪೇಟ್ ನಿವಾಸಿ ಶ್ರೀಕಾಂತ್(೩೮) ಬಂಧಿತ. ಆರೋಪಿ ಮದ್ಯದ ಅಮಲಿನಲ್ಲಿ ತನ್ನ ಸಹೋದರ ಸಂಬಂಧಿ ಸತೀಶ್ ಕುಮಾರ್(೩೮) ಎಂಬಾತನನ್ನು ಕೊಲೆಗೈದಿದ್ದ. ಬಂಧಿತ ಆರೋಪಿಯು ಬುಕ್ ಬೈಂಡಿಂಗ್ ಹಾಗೂ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ ಸ್ನೇಹಿತರ ಭೇಟಿಯಾಗಲು ಏ.೧೮ರ ರಾತ್ರಿ ದೊಮ್ಮಲೂರಿಗೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಸಿಕ್ಕ ಆರೋಪಿ ಮತ್ತು ಸತೀಶ್ ಕುಮಾರ್ ಹಾಗೂ ಇತರರು ಮದ್ಯ ಸೇವಿಸಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಸಹೋದರರ ನಡುವೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಶ್ರೀಕಾಂಕ್, ಹಳೇ ದ್ವೇಷದ ವಿಚಾರ ಪ್ರಸ್ತಾಪಿಸಿ ಸತೀಶ್ ಕುಮಾರ್ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.