ನ್ಯೂಸ್

ಎಬಿಜಿಎಲ್ ಮಾಜಿ ಅಧ್ಯಕ್ಷನ ಕೊಲೆ ಆರೋಪಿ ಸಿಬಿಐ ಬಲೆಗೆ

ಬೆಂಗಳೂರು: ಅಖಿಲ ಭಾರತೀಯ ಗೂರ್ಖಾ ಲೀಗ್‌ನ (ಎಬಿಜಿಎಲ್) ಅಂದಿನ ಅಧ್ಯಕ್ಷ ಮದನ್ ತಮಾಂಗ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಬೊಮ್ಮಸಂದ್ರದ ಮಾರುತಿನಗರದಲ್ಲಿ ಬಂಧಿಸಿದ್ದಾರೆ.

ಬೊಮ್ಮಸಂದ್ರ, ಮಾರುತಿನಗರದಲ್ಲಿ ನೆಲೆಸಿದ್ದ ಆರೋಪಿ ಪುರಣ್ ಬಹದ್ದೂರ್ ರೈ ಎಂಬಾತನ್ನು ಗುರುವಾರ ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. 2017ರಿಂದ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕೃತ್ಯ ಎಸಗಿದ ಮೇಲೆ ಪುರಣ್ ರೈ ತನ್ನ ನೆಲೆಯನ್ನು ಡಾರ್ಜಿಲಿಂಗ್‌ನಿಂದ ಬೆಂಗಳೂರಿಗೆ ಬದಲಾಯಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2010ರ ಮೇ 21ರಂದು ಡಾರ್ಜಿಲಿಂಗ್‌ನಲ್ಲಿ ನಡೆದ ಎಬಿಜಿಎಲ್ ಅಧ್ಯಕ್ಷನ ಕೊಲೆ ಪ್ರಕರಣವನ್ನು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರ ಆದೇಶದ ಮೇಲೆ ಸಿಬಿಐ ತನಿಖೆ ಕೈಗೊಂಡಿತ್ತು. 2011ರಲ್ಲಿ ಡಾರ್ಜಿಲಿಂಗ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು ಆರೋಪಿ ಪುರನ್ ರೈನ್ನು ಬಂಧಿಸಿ ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಜಾಮೀನು ಪಡೆದ ಆರೋಪಿ 2017ರಿಂದ ಕೋರ್ಟ್ ವಿಚಾರಣೆಗೆ ಹಾಜರಾಗುತ್ತಿಲ್ಲ. ಕೊಲ್ಕತ್ತಾ ಸಿಟಿ ಸೆಷನ್ಸ್ ನ್ಯಾಯಾಲಯ 2017ರಂದು ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಆಗಲೂ ಆರೋಪಿ ಕೋರ್ಟ್‌ಗೆ ಹಾಜರಾಗಿರಲಿಲ್ಲ.

ಮತ್ತೆ 2024ರ ನವೆಂಬರ್‌ನಲ್ಲಿ ಕೋರ್ಟ್ ಬಂಧನ ಸಹಿತ ವಾರಂಟ್ ಹೊರಡಿಸಿತು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.