ಬೆಂಗಳೂರು: ಪ್ರೇಯಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಯುವಕನ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಕೊಡಗು ಜಿಲ್ಲೆಯ ಕುಶಾಲನಗರ ನಿವಾಸಿ ಸಿ. ಕುಮಾರ್ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತ ಯುವತಿ ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೇವಲ ಡೆತ್‌ನೋಟ್‌ನಲ್ಲಿ ಹೆಸರು ಉಲ್ಲೇಖಿಸಿದ್ದಾಳೆ ಎಂದ ಮಾತ್ರಕ್ಕೆ ಘಟನೆಯಲ್ಲಿ ಅರ್ಜಿದಾರರನ್ನು ನೇರ ಹೊಣೆಗಾರನನ್ನಾಗಿ ಮಾಡುವುದು ಸರಿಯಲ್ಲ. ಹೀಗಾಗಿ, ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದರು.
ಮೃತ ಯುವತ ತಂದೆಯ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಮೃತ ಯುವತಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಜತೆಗೆ ಮದುವೆಯಾಗಲು ನಿರಾಕರಿಸಿದ್ದಾರೆ. ಈ ಬಗ್ಗೆ ಎಲ್ಲ ಸತ್ಯಾಂಶಗಳು ಟೆಲಿೆನ್ ಸಂಭಾಷಣೆ ಹಾಗೂ ಇಬ್ಬರು ಪರಸ್ಪರ ರವಾನಿಸಿಕೊಂಡ ಸಂದೇಶದಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಬಗ್ಗೆ ಪೊಲೀಸರು ಎ್ಎಸ್‌ಎಲ್‌ಗೂ ಮಾಹಿತಿ ಕಳುಹಿಸಿದ್ದು. ಎ್ಎಸ್‌ಎಲ್ ವರದಿ ಇನ್ನಷ್ಟೇ ಬರಬೇಕಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸರ್ಕಾರಿ ಪರ ವಕೀಲರು, ಮೃತ ಯುವತಿ ಈ ಹಿಂದೆ ಹಲವು ಬಾರಿ ಡೆತ್ ನೋಟ್ ಬರೆದಿದ್ದಳು. ಪ್ರತಿ ಡೆತ್‌ನೋಟ್ ನಲ್ಲಿಯೂ ಅರ್ಜಿದಾರರೂ ಆಕೆಯ ನಡತೆಯ ಮೇಲೆ ಸಂಶಯಪಟ್ಟು ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಜತೆಗೆ ಪ್ರಿಯತಮ ಮದುವೆಯಾಗಲು ನಿರಾಕರಿಸಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದಾಳೆ. ಈ ಬಗ್ಗೆ ತನಿಖೆ ಪೂರ್ಣಗೊಂಡಿದ್ದು , ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಅರ್ಜಿದಾರರೂ ಮೃತ ಯುವತಿಯ ಜತೆ ಸಂಬಂಧ ಹೊಂದಿದ್ದು, ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಬಳಿಕ ಕೆಲವು ದಿನಗಳ ನಂತರ ಆರೋಪಿಯೂ ಯುವತಿ ಪರ ಪುರಷರ ಜತೆ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿ ಮದುವೆಯಾಗಲು ನಿರಾಕಿಸಿದ್ದಾನೆ ಎಂಬ ಅಂಶ ಗಮನಿಸಿದೆ.
ಅಲ್ಲದೆ ಅರ್ಜಿದಾರರು ಆಕೆಯ ನಡತೆಗೆಟ್ಟವಳಾದ ಕಾರಣ ಆಕೆ ಸತ್ತರೂ ಚಿಂತಿಸುವುದಿಲ್ಲ. ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಎದುರಿಸಲು ಯಾವುದೇ ಹಿಂಜರಿಕೆಯಿಲ್ಲ ಎಂದು ಹೇಳಿರುವ ಬಗ್ಗೆ ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ ಸಾಯುವ ಮೊದಲು ಇಬ್ಬರ ನಡುವೆ ಸಂಭಾಷಣೆ ನಡೆದಿದೆ. ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಅರ್ಜಿದಾರರು ಕ್ರಿಮಿನಲ್ ಉದ್ದೇಶದಿಂದ ಆಕೆಯನ್ನು ನಿಂದಿಸಿದ್ದು ತಿಳಿದು ಬರುತ್ತದೆ ಎಂದಿರುವ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣವೇನು?
21 ವರ್ಷದ ಯುವತಿ ಐದು ವರ್ಷಗಳಿಂದ ಯುವಕನ ಜತೆ ಪ್ರೇಮ ಸಂಬಂಧ ಹೊಂದಿದ್ದಳು. ಯುವಕ ಆಕೆಯ ನಡತೆಯನ್ನು ಸಂಶಯಿಸಿ ಅವಾಚ್ಯಾ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ. 2022ರ ಆ.29ರಂದು ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಯುವತಿ ಆತ್ಮಹತ್ಯೆಗೆ ಪ್ರಿಯಕರನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟಿದ್ದಳು. ಈ ಬಗ್ಗೆ ಮೃತಳ ತಂದೆ ಕುಶಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.